ಮೂಲ್ಕಿ ಬಳಿಯ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಅವ್ಯವಸ್ಥೆ
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಬಳಿಯ ಕೊಲ್ನಾಡುವಿನ ಕಿರು ಸೇತುವೆಯು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ದುಃಸ್ಥಿತಿ ಬಗ್ಗೆ ಸ್ಥಳೀಯರು ಸಂಬಂಧಿಸಿದವರಿಗೆ ದೂರು ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ.
ಜಂಕ್ಷನ್‌ನಿಂದ ಕೊಲ್ನಾಡು ಪ್ರದೇಶದಕ್ಕೆ ಸಂಚಾರ ಕೊಂಡಿಯಾಗಿರುವ ಈ ಸೇತುವೆಯ ಎರಡೂ ಕಡೆ ಸಮಸ್ಯೆ ಇದೆ. ಉಡುಪಿಯತ್ತ ತೆರಳುವ ಸೇತುವೆಯ ಭಾಗದ ತಡೆಗೋಡೆ ಆರು ತಿಂಗಳ ಹಿಂದೆ ನಡೆದ ಅಪಘಾತದಿಂದ ಹಾನಿಗೀಡಾಗಿದ್ದು, ಇನ್ನೂ ದುರಸ್ತಿ ಮಾಡಿಲ್ಲ. ಮತ್ತೊಂದು ಪಾರ್ಶ್ವದಲ್ಲೂ ವಾಹನವೊಂದು ಡಿಕ್ಕಿ ಹೊಡೆದು ತಡೆಗೋಡೆ ಕಿತ್ತು ಹೋಗಿದೆ. ಆದರೂ ದುರಸ್ತಿ ಮಾಡಿಲ್ಲ.
ಮಂಗಳೂರಿನತ್ತ ಸಾಗುವ ರಸ್ತೆಯ ಸೇತುವೆ ಮಧ್ಯದಲ್ಲೇ ಬಿರುಕು ಬಿಟ್ಟಿದೆ. ಎಡ ಭಾಗದ ತಡೆಗೋಡೆಯಲ್ಲೂ ಬಿರುಕು ಬಿಟ್ಟಿದೆ. ಆದರೂ ಸಂಬಂಧಿತ ಇಲಾಖೆಯಾಗಲಿ, ನಿರ್ವಹಣೆ ಗುತ್ತಿಗೆ ಪಡೆದಿರುವ ಸಂಸ್ಥೆಯೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ವಾಹನ ನಿಯಂತ್ರಣ ತಪ್ಪಿದರೆ ಸುಮಾರು 20 ಅಡಿ ಆಳಕ್ಕೆ ಉರುಳಿ ಬೀಳುವ ಸಾಧ್ಯತೆ ಇದೆ.
ಮೂಲ್ಕಿಯಿಂದ ಮುಕ್ಕದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಲವು ಸಮಸ್ಯೆಗಳ ಬಗ್ಗೆ ವಿಸ್ತೃತ ಮನವಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಿರ್ವಹಣೆ ನಡೆಸುವ ಗುತ್ತಿಗೆ ಸಂಸ್ಥೆಗೆ ನೀಡಿದ್ದೇವೆ. ಆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇನ್ನಾದೂ ಸಂಬಂಧಿಸಿದವರು ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗೃಹರಕ್ಷಕ ದಳದ ನಿಕಟಪೂರ್ವ ಕಮಾಂಡರ್ ಎಚ್.ಮನ್ಸೂರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.