ADVERTISEMENT

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣ: 700 ಪುಟಗಳ ದೋಷಾರೋಪಣೆ ಪಟ್ಟಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 4:47 IST
Last Updated 12 ಜೂನ್ 2020, 4:47 IST
ಬಜ್ಪೆಯ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆದಿತ್ಯ ರಾವ್‌
ಬಜ್ಪೆಯ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆದಿತ್ಯ ರಾವ್‌   

ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ತಂಡವು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದೆ.

ಬಜ್ಪೆಯ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿಯಲ್ಲಿ ಆದಿತ್ಯ ರಾವ್ ಸ್ಫೋಟಕ ಇರಿಸಿದ್ದ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಕರಣದ ತನಿಖೆ ಏಪ್ರಿಲ್‌ನಲ್ಲೇ ಫೂರ್ಣಗೊಂಡಿತ್ತು. 700 ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದ್ದು, ಅದನ್ನು ಜಿಲ್ಲಾಧಿಕಾರಿ ಅನುಮತಿ ಪಡೆದು ರಾಜ್ಯ ಸರ್ಕಾರದ ಅನುಮತಿಗಾಗಿ ಕಳುಹಿಸಲಾಗಿತ್ತು. ಇದೀಗ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿಯಿಂದ ಪೂರ್ವಾನುಮತಿ ಪತ್ರ ಬಂದಿದ್ದು, ಈ ಹಿನ್ನೆಲೆಯಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಎಸಿಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.

ADVERTISEMENT

ಆದಿತ್ಯ ರಾವ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ಆರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆದಿತ್ಯ ರಾವ್ ದುಷ್ಕೃತ್ಯ ಎಸಗಿ, ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇರಿಸಿದ್ದನು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗ್‌ನಲ್ಲಿ ಕಂಡುಬಂದ ಶಂಕಾಸ್ಪದ ವಸ್ತುಗಳು ಸ್ಫೋಟಕಗಳೇ ಆಗಿವೆ ಎನ್ನುವುದು ಎಫ್‌ಎಸ್‌ಎಲ್ ಪರೀಕ್ಷೆಯಿಂದ ಸಾಬೀತಾಗಿದೆ ಎಂಬಿತ್ಯಾದಿ ಪ್ರಮುಖ ಸಂಗತಿಗಳು ಆರೋಪ ಪಟ್ಟಿಯಲ್ಲಿವೆ ಎಂದು ಬೆಳ್ಳಿಯಪ್ಪ ತಿಳಿಸಿದ್ದಾರೆ.

ಬ್ರೈನ್ ಮ್ಯಾಪಿಂಗ್ ಬಾಕಿ

ಆರೋಪಿ ಆದಿತ್ಯ ರಾವ್‌ನ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಲಾಕ್‌ಡೌನ್‌ನಿಂದಾಗಿ ಬಾಕಿ ಉಳಿದಿದೆ. ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆಯಲಾಗಿದ್ದು, ಶೀಘ್ರದಲ್ಲೇ ಆತನನ್ನು ಬೆಂಗಳೂರಿಗೆ ಕರೆದೊಯ್ದು ಈ ಪ್ರಕ್ರಿಯೆ ನಡೆಸಲಾಗುವುದು ಎಂದು ಎಸಿಪಿ ಬೆಳ್ಳಿಯಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.