
ಉಪ್ಪಿನಂಗಡಿ/ಪುತ್ತೂರು: ಚಾರ್ವಾಕ ಸಹಕಾರ ಸಂಘದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾಗಿರುವ ಚಾರ್ವಾಕ ನಿವಾಸಿ ಮನೋಹರ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನೀಡಿರುವ ದೂರಿನ ಆಧಾರದಲ್ಲಿ ಗಣೇಶ್ ಉದನಡ್ಕ, ರಾಧಾಕೃಷ್ಣ ಮುದುವ, ಅಖಿಲ್ ಬೊಮ್ಮೊಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
‘ಪ್ರಕರಣ ಸಂಬಂಧ ಅಖಿಲ್ ಬೊಮ್ಮಳಿಕೆ ಎಂಬಾತನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಡಿ. 17ರಂದು ರಾತ್ರಿ ಮನೆಯಂಗಳಕ್ಕೆ ಬಂದ ಆರೋಪಿಗಳು ಜಾತಿನಿಂದನೆ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಹಾಗೂ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಮಗನ ಮೇಲೆ ಹಲ್ಲೆಯಾಗುವುದನ್ನು ನೋಡಿದ ಮನೋಹರ್ ಅವರ ತಾಯಿ ರಕ್ತದೊತ್ತಡದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದಾರೆ. ಗಲಾಟೆ ನಡೆಯುವಾಗ ನೆರಮನೆಯವರು ಘಟನಾ ಸ್ಥಳಕ್ಕೆ ಬಂದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುತ್ತೂರಿನ ಶಾಸಕ ಅಶೋಕ್‌ಕುಮಾರ್ ರೈ ಅವರು ಮನೋಹರ್ ಅವರನ್ನು ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
‘ಮನೋಹರ್ ಅವರ ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ವೈಯಕ್ತಿಕ ಕಾರಣಕ್ಕಾಗಿ ಹಲ್ಲೆ ನಡೆದಿದೆಯೋ ಅಥವಾ ರಾಜಕೀಯ ಕಾರಣಕ್ಕಾಗಿ ಹಲ್ಲೆ ಮಾಡಲಾಗಿದೆಯೋ ಎಂಬುವುದು ಪೊಲೀಸ್ ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ’ ಎಂದು ಅಶೋಕ್‌ಕುಮಾರ್ ರೈ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.