ಜೈಲು ಶಿಕ್ಷೆ (ಪ್ರಾತಿನಿಧಿಕ ಚಿತ್ರ)
ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದ ಅಪರಾಧಿಗೆ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ₹10 ಸಾವಿರ ದಂಡ ವಿಧಿಸಿದೆ. ಜೊತೆಗೆ ಯುವತಿಗೆ ಕೊಲೆ ಬೆದರಿಕೆ ಹಾಕಿದ್ದ ಇನ್ನಿಬ್ಬರು ಅಪರಾಧಿಗಳಿಗೂ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಪುತ್ತೂರು ಕಬಕದ ನಿವಾಸಿ ನಿತೇಶ್ (40) ಶಿಕ್ಷೆಗೆ ಗುರಿಯಾದವ. ಈತನ ತಂದೆ ರಾಮಣ್ಣ ಪೂಜಾರಿ (63), ಭಾವ ನಿಖಿತಾಶ್ ಸುವರ್ಣ (40) ಇವರಿಬ್ಬರಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹5,000 ವಿಧಿಸಲಾಗಿದೆ.
ಘಟನೆ ಏನು: ನಿತೇಶ್, ಯುವತಿಯೊಬ್ಬರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ನಡೆಸಿದ್ದ, ಆಕೆಯ ಮನೆಗೂ ಹೋಗಿ ಬಲವಂತದಿಂದ ದೈಹಿಕ ಸಂಪರ್ಕ ನಡೆಸಿದ್ದ. ಯುವತಿ ಮದುವೆಯಾಗಲು ಕೇಳಿದಾಗ ಅದನ್ನು ನಿರಾಕರಿಸಿದ್ದ. ಹೀಗಾಗಿ, ಆ ಯುವತಿ ನಿತೇಶ್ ತಂದೆ ಮತ್ತು ಭಾವನ ಭೇಟಿ ಮಾಡಿ ವಿನಂತಿಸಿಕೊಂಡಿದ್ದು, ಆ ವೇಳೆ ಅವರು ಅವಾಚ್ಯ ಪದಗಳಲ್ಲಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯಕ್ ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ, ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ. ಶೇಖರ ಶೆಟ್ಟಿ, ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು. ಒಟ್ಟು 16 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.