ADVERTISEMENT

ಕರಾವಳಿ; ಪ್ರವಾಸಿ ತಾಣಗಳಲ್ಲಿ ಜನವೋ ಜನ

ಹೋಟೆಲ್‌ಗಳು ಭರ್ತಿ, ದೇವಸ್ಥಾನಗಳಲ್ಲಿ ಭಕ್ತರ ಸರತಿ ಸಾಲು, ಬೀಚ್‌ಗಳಲ್ಲೂ ಜನ ಸಂದಣಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 5:33 IST
Last Updated 26 ಡಿಸೆಂಬರ್ 2023, 5:33 IST
ಉಡುಪಿ ಸಮೀಪದ ಮಲ್ಪೆ ಬೀಚ್‌ನಲ್ಲಿ ಸೋಮವಾರ ರಜೆಯ ಮೋಜು ಅನುಭವಿಸುತ್ತಿರುವ ಪ್ರವಾಸಿಗರು
ಉಡುಪಿ ಸಮೀಪದ ಮಲ್ಪೆ ಬೀಚ್‌ನಲ್ಲಿ ಸೋಮವಾರ ರಜೆಯ ಮೋಜು ಅನುಭವಿಸುತ್ತಿರುವ ಪ್ರವಾಸಿಗರು   

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಸೋಮವಾರವೂ ಭಾರಿ ಜನಸಂದಣಿ ಕಂಡು ಬಂತು.

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನಗಳು ಭಕ್ತರಿಂದ ಗಿಜಿಗುಡುತ್ತಿದ್ದವು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಲಕ್ಷಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಷಷ್ಠಿ ಜಾತ್ರೆಯ ದಿನಕ್ಕಿಂತಲೂ ಹೆಚ್ಚು ಪ್ರವಾಸಿಗರಿದ್ದರು. ಭಕ್ತರ ದಟ್ಟಣೆ ವಿಪರೀತ ಜಾಸ್ತಿಯಾಗಿದ್ದರಿಂದ ದೇವಳದ ಪ್ರವೇಶ ದ್ವಾರಗಳನ್ನು ಕೆಲ ಕಾಲ ಮುಚ್ಚಬೇಕಾದ ಅನಿವಾರ್ಯ ಎದುರಾಯಿತು. ದೇವಸ್ಥಾನದ ಹೊರಾಂಗಣವನ್ನು ಪ್ರವೇಶಿಸುವುದಕ್ಕೂ ಭಕ್ತರು ಪ್ರಯಾಸ ಪಡಬೇಕಾಯಿತು. ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಮುಂಜಾನೆಯೇ ಭಕ್ತರು ಕಿಕ್ಕಿರಿದು ಸೇರಿದ್ದರು. ಭಾನುವಾರ ರಾತ್ರಿ ಬಂದಿದ್ದ ಕೆಲ ಪ್ರವಾಸಿಗರು  ದೇವಸ್ಥಾನದ ರಥಬೀದಿಯಲ್ಲೇ ಮಲಗಿದ್ದರು.

ADVERTISEMENT

ಧರ್ಮಸ್ಥಳದ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ 5 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ದೇವರ ದರ್ಶನಕ್ಕಾಗಿ ಭಕ್ತರು ತಾಸುಗಟ್ಟಲೆ ಕಾಯಬೇಕಾಯಿತು.

ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಮಲ್ಪೆ, ಕಾಪು, ಪಡುಬಿದ್ರಿ, ಮರವಂತೆ ಬೀಚ್‌ಗಳಿಗೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು.

ಹೋಟೆಲ್‌, ಹೋಮ್‌ ಸ್ಟೇ ಭರ್ತಿ: ಬಹುತೇಕ ಹೋಟೆಲ್‌ ಹಾಗೂ ಹೋಮ್‌ ಸ್ಟೇಗಳಲ್ಲಿ ಈಗ ಕೊಠಡಿಗಳು ಬಾಡಿಗೆಗೆ ಸಿಗುತ್ತಿಲ್ಲ. ಕೆಲವು ಹೋಟೆಲ್‌ ಹಾಗೂ ಹೋಂ ಸ್ಟೇಗಳು ಬಾಡಿಗೆ ದರವನ್ನೂ ಎರಡು–ಮೂರು ಪಟ್ಟು ಹೆಚ್ಚಿಸಿವೆ. ಬಹುತೇಕ ದೇವಸ್ಥಾನಗಳ ಯಾತ್ರಿನಿವಾಸ ಹಾಗೂ ವಸತಿಗೃಹಗಳಲ್ಲಿ ಬಾಡಿಗೆ ಕೊಠಡಿಗಳು ಭರ್ತಿಯಾಗಿವೆ.

ಪ್ರವಾಸ ಅರ್ಧದಲ್ಲೇ ಮೊಟಕು: ಲಾಡ್ಜ್‌ಗಳಲ್ಲಿ ಬಾಡಿಗೆ ಕೊಠಡಿಯ ದುಬಾರಿ ದರ ಕೇಳಿ ಪ್ರವಾಸಿಗರು ಕಂಗಾಲಾಗಿದ್ದಾರೆ. ಐದಾರು ದಿನಗಳ ಪ್ರವಾಸದ ಯೋಜನೆ ಹಾಕಿಕೊಂಡು ಬಂದ ಕೆಲವರು ವಸತಿ ವ್ಯವಸ್ಥೆ ಆಗದ ಕಾರಣ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮರಳುತ್ತಿದ್ದಾರೆ.

ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕಾರುಗಳು ಸಾಲುಗಟ್ಟಿ ಸಾಗಿದವು. 

ಮಂಗಳೂರಿನ ಪಣಂಬೂರಿನ ಕಡಲ ಕಿನಾರೆಯಲ್ಲಿ ಸೋಮವಾರ ಸೂರ್ಯಾಸ್ತದ ಮೋಹಕ ದೃಶ್ಯ

ಮಂಗಳೂರಿನ ಪಣಂಬೂರಿನ ಕಡಲ ಕಿನಾರೆಯಲ್ಲಿ ಪ್ರವಾಸಿಗರು ಒಂಟೆ ಸವಾರಿಯ ಮಜಾವನ್ನು ಸೋಮವಾರ ಅನುಭವಿಸಿದರು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯರು ಭಕ್ತರು ಸೋಮವಾರ ಸಾಲುಗಟ್ಟಿ ನಿಂತಿದ್ದರು
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಭಾನುವಾರ ರಾತ್ರಿ ರಥಬೀದಿಯಲ್ಲೇ ಮಲಗಿದ್ದುದು ಕಂಡು ಬಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.