ADVERTISEMENT

ಮನೆ–ಮನದಲ್ಲಿ ಯೇಸು ಜನನದ ಆಮೋದ

ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ; ಸೇಂಟ್‌ ಆಂತೋನಿ ಆಶ್ರಮದಲ್ಲಿ ಭರವಸೆ ಮೂಡಿಸಿದ ಬಿಷಪ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 7:12 IST
Last Updated 26 ಡಿಸೆಂಬರ್ 2025, 7:12 IST
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ನಗರದ ಜೆಪ್ಪು ಸೇಂಟ್‌ ಆಂತೋನಿ ಆಶ್ರಮದ ವಾಸಿಗಳ ಜೊತೆ ಕ್ರಿಸ್‌ಮಸ್ ಆಚರಿಸಿದರು 
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ನಗರದ ಜೆಪ್ಪು ಸೇಂಟ್‌ ಆಂತೋನಿ ಆಶ್ರಮದ ವಾಸಿಗಳ ಜೊತೆ ಕ್ರಿಸ್‌ಮಸ್ ಆಚರಿಸಿದರು    

ಮಂಗಳೂರು: ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚರ್ಚ್‌ಗಳು ಮತ್ತು ಮನೆಗಳಲ್ಲಿ ಗುರುವಾರ ಕ್ರಿಸ್‌ಮಸ್ ಸಂಭ್ರಮ ಕಂಡುಬಂದಿತು. ಶಾಂತಿಪ್ರಿಯನೆಂದೇ ಬಣ್ಣಿಸಲಾಗುವ ಯೇಸುಕ್ರಿಸ್ತನ ಜನ್ಮದಿನದ ಖುಷಿ ಎಲ್ಲೆಡೆ ಹಬ್ಬಿತ್ತು.

ಬುಧವಾರ ರಾತ್ರಿ ಚರ್ಚ್‌ಗಳಲ್ಲಿ ನಡೆದ ವಿಶೇಷ ಪ್ರಾರ್ಥನೆಗಳಲ್ಲಿ ಪಾಲ್ಗೊಂಡ ಭಕ್ತರು ಗುರುವಾರ ಬೆಳಿಗ್ಗಿನ ಪ್ರಾರ್ಥನೆಯಲ್ಲೂ ಶ್ರದ್ಧೆ ಮತ್ತು ಭಕ್ತಿಯಿಂದ ಪಾಲ್ಗೊಂಡರು. ನಗರದ ಪ್ರಮುಖ ಚರ್ಚ್‌ಗಳಾದ ಮಿಲಾಗ್ರಿಸ್‌, ರೊಸಾರಿಯೊ, ದೇರೆಬೈಲ್ ಕೊಂಚಾಡಿ, ಉರ್ವ, ಲೇಡಿ ಹಿಲ್, ಜಪ್ಪು, ಬೆಂದೂರು, ಬಿಜೈ, ಅಶೋಕನಗರ, ಕೂಳೂರು, ವೆಲೆನ್ಸಿಯಾ, ಉರ್ವ, ಬೊಂದೆಲ್‌ ಮುಂತಾದ ಕಡೆಗಳಲ್ಲಿ ಪ್ರಾರ್ಥನೆಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೆಲವು ಚರ್ಚ್‌ಗಳಲ್ಲಿ ಗುರುವಾರ ಸಂಜೆ ಪ್ರಾರ್ಥನೆ ನೆರವೇರಿತು. 

ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ಚರ್ಚ್‌ಗಳಲ್ಲಿ ಗೋದಲಿಗಳ ವೈವಿಧ್ಯಮಯ ಮಾದರಿಗಳನ್ನು ತಯಾರಿಸಿ ಇರಿಸಲಾಗಿತ್ತು. ಚರ್ಚ್ ಆವರಣದಲ್ಲೂ ಮನೆಗಳ ಎದುರೂ ಅಂಗಡಿಗಳ ಮುಂದೆಯೂ ಮಿನುಗುತ್ತಿದ್ದ ‘ನಕ್ಷತ್ರಗಳ’ ಬೆಳಕು ಮುದ ನೀಡಿತು. ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆಯಲ್ಲಿ ಮೊಳಗಿದ ‘ಕ್ಯಾರಲ್ಸ್’ ಭಕ್ತಿಭಾವನ್ನು ಇಮ್ಮಡಿಗೊಳಿಸಿದವು. ಕೆಂಪು ಉಡುಪು ತೊಟ್ಟುಕೊಂಡು ಬಿಳಿ ಗಡ್ಡ ಬಿಟ್ಟುಕೊಂಡಿದ್ದ ಸಾಂಟಾಕ್ಲಾಸ್‌ ವೇಷಧಾರಿಗಳು ಎಲ್ಲ ಕಡೆಗಳಲ್ಲೂ ‘ಜಿಂಗಲ್ ಬೆಲ್ಸ್‌’ ಹಾಡಿಗೆ ಕುಣಿದು ಇತರರನ್ನೂ ಕುಣಿಸಿದರು. ಅಲಂಕೃತವಾಗಿದ್ದ ಮಾಲ್‌ಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲೂ ಸಾಂಟಾಕ್ಲಾಸ್ ಮೆರುಗು ತುಂಬಿತು.  

ADVERTISEMENT

ಕರಾವಳಿಯ ರೋಮನ್‌, ಸಿರಿಯನ್‌ ಕಥೋಲಿಕ್‌, ಪ್ರಾಟೆಸ್ಟೆಂಟ್‌, ಸಿಎಸ್‌ಐ, ಪೆಂಟಕೋಸ್ಟ್‌ ಪಂಗಡಗಳ ವಿವಿಧ ಭಾಷಿಕರು ಖುಷಿಯ ಅಲೆಯಲ್ಲಿ ತೇಲಿದರು. ಬಾಲಯೇಸು ಮೂರ್ತಿಯನ್ನು ಇಟ್ಟು ಸ್ತುತಿಗೀತೆ ಹಾಡಿ ಮೇಣದ ಬತ್ತಿ ಬೆಳಗಿ ಆರಾಧಿಸಿದರು. ಕ್ರಿಸ್‌ಮಸ್‌ನ ವಿಶೇಷ ತಿಂಡಿ ‘ಕುಸ್ವಾರ್‌’ಗಳನ್ನು ಹಂಚಿದರು. ಬಡವರು ಮತ್ತು ಸಂಕಷ್ಟದ ಬದುಕು ನಡೆಸುವವರಿಗೂ ಕುಸ್ವಾರ್ ತಲುಪಿಸಿದರು. ಧಾರ್ಮಿಕ ಸೌಹಾರ್ದವನ್ನೂ ಮೆರೆದರು. ಆರ್ಥಿಕ ನೆರವು, ಬಟ್ಟೆ ಮತ್ತು ವಸ್ತುಗಳನ್ನು ನೀಡಿಯೂ ಕೆಲವರು ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ನಗರದ ಜಪ್ಪು ಸೇಂಟ್‌ ಆಂತೋನಿ ಆಶ್ರಮದಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸಿಕೊಟ್ಟು ಆಶ್ರಮ ವಾಸಿಗಳಲ್ಲಿ ಭರವಸೆ ಮೂಡಿಸಿದರು. ಪೂಜೆಯ ಅಂಗವಾಗಿ ಸಂದೇಶ ನೀಡಿದ ಅವರು ‘ದೇವಪುತ್ರನು ಭೂಲೋಕದಲ್ಲಿ ಸಾಮಾನ್ಯ ಮನುಷ್ಯನಂತೆ ಬದುಕಿ ಆದರ್ಶ ಮೆರೆದಿದ್ದಾರೆ. ಮಾನವ ಜಗತ್ತಿಗಾಗಿಯೇ ಬದುಕಿದ ಯೇಸು ಕ್ರಿಸ್ತ ಅದಕ್ಕಾಗಿಯೇ ಜೀವವನ್ನೂ ತ್ಯಾಗ ಮಾಡಿದರು. ಜಗದ ಜನರಿಗಾಗಿ ಸದಾ ಕಾಲ ಪ್ರಾರ್ಥಿಸಿದರು. ಈ ಎಲ್ಲ ಕಾರಣಗಳಿಂದ ನಾವು ದೇವರೊಂದಿಗೆ ಬದುಕಲು ಕಲಿಯಬೇಕು’ ಎಂದು ಹೇಳಿದರು. 

‘ದೈವತ್ವದ ಬಗ್ಗೆ ಮನುಷ್ಯ ಅಸ್ಪಷ್ಟ ಕಲ್ಪನೆ ಹೊಂದಿದ್ದ. ಈಗ ಹಾಗಿಲ್ಲ. ನಮ್ಮ ಮುಂದೆ ದೇವರ ಸ್ಪಷ್ಟ ಚಿತ್ರಣವಿದೆ. ಮಗುವಿನ ರೂಪದ ದೇವರು ಸೌಮ್ಯ, ಮುಗ್ಧ, ಸರಳ, ಸಂತೋಷದಾಯಕ ಮತ್ತು ಕರುಣಾಮಯಿಯಾಗಿ ಜಗದಲ್ಲಿ ನೆಲೆಸಿದ್ದಾರೆ’ ಎಂದ ಅವರು ‘ಕ್ರಿಸ್ಮಸ್ ಬಾಹ್ಯ ಆಚರಣೆಗೆ ಮಾತ್ರ ಸೀಮಿತವಾಗದೆ ಮನುಷ್ಯರ ನಡುವಿನ ಸಂಬಂಧಗಗಳು ಗಟ್ಟಿಯಾಗಲು ಬಳಕೆಯಾಗಬೇಕು’ ಎಂದರು. ಪ್ರಾರ್ಥನೆಯಲ್ಲಿ ಹಲವು ಧರ್ಮಗುರುಗಳು ಭಾಗವಹಿಸಿದ್ದರು.

ಮಂಗಳೂರಿನ ಉರ್ವ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಭಕ್ತರು

ಸಂವಾದ ಶುಭಾಶಯ

ವಿನಿಮಯ ಜಪ್ಪು ಸೇಂಟ್‌ ಆಂತೋನಿ ಆಶ್ರಮದಲ್ಲಿ ಪ್ರಾರ್ಥನೆಯ ನಂತರ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಅವರು ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿದರು ಅವರಿಗೆ ಶುಭ ಕೋರಿದರು. ವೃದ್ಧರು ಯುವಕರು ಮತ್ತು ಅಶಕ್ತರು ಬಿಷಪ್ ಅವರನ್ನು ಸುತ್ತುವರಿದು ಅವರ ಅಂಗೈಗೆ ಮುತ್ತಿಕ್ಕಿ ಸಂತಸಪಟ್ಟರು. ಸೇಂಟ್‌ ಅಂತೋನಿ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾ ಜೆ.ಬಿ ಕ್ರಾಸ್ತ ಆಡಳಿತಾಧಿಕಾರಿ ಫಾ. ಪ್ರವೀಣ್ ಮಾರ್ಟಿಸ್‌ ಸಹ ಆಡಳಿತಾಧಿಕಾರಿ ಫಾ. ನಿಶಾಂತ್ ವಿವಿಯನ್ ರಾಡ್ರಿಗಸ್ ಮತ್ತು ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ಫಾ.ಅನಿಲ್ ಐವನ್ ಫೆರ್ನಾಂಡಿಸ್ ಪಾಲ್ಗೊಂಡರು. ಹಬ್ಬದ ಮುನ್ನಾದಿನವಾದ ಬುಧವಾರ ರಾತ್ರಿ ಬಿಷಪ್ ಅವರು ರೊಸಾರಿಯೊ ಕೆಥೆಡ್ರಲ್‌ನಲ್ಲಿ ಪೂಜೆ ನೆರವೇರಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.