
ಮಂಗಳೂರು: ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಮಂಗಳೂರು ಘಟಕದ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಭಿನವ್ ಬನ್ಸಾಲ್ ಹಾಗೂ ಉಪಾಧ್ಯಕ್ಷರಾಗಿ ಅನಂತೇಶ್ ಪ್ರಭು ಆಯ್ಕೆಯಾಗಿದ್ದಾರೆ.
ಸಿಐಐ ಮಂಗಳೂರು ಘಟಕದ ವಾರ್ಷಿಕ ದಿನಾಚರಣೆಯಲ್ಲಿಈಚೆಗೆ 2026–27 ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಸಿಐಐ ಕರ್ನಾಟಕ ರಾಜ್ಯ ಪರಿಷತ್ತಿನ ಉಪಾಧ್ಯಕ್ಷ ಗುರುಪ್ರಸಾದ್ ಮೂಡ್ಲಾಪುರ, ‘ದೇಶದ ಆರ್ಥಿಕ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವುದು ಅತೀ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ). ಬಂಡವಾಳ ಲಭ್ಯತೆ, ಮುಕ್ತ ವ್ಯಾಪಾರ ಒಪ್ಪಂದದ ಪರಿಣಾಮಕಾರಿ ಬಳಕೆ, ಏರುಪೇರಾಗುವ ಜಾಗತಿಕ ಪೂರೈಕೆ ಸರಪಣಿಗೆ ಹೊಂದಿಕೊಳ್ಳುವುದರಲ್ಲಿ ಭವಿಷ್ಯದ ಅಭಿವೃದ್ಧಿಯು ಅವಲಂಬಿತವಾಗಿದೆ’ ಎಂದು ಹೇಳಿದರು.
‘ಜಾಗತಿಕ ಪೈಪೋಟಿ ಎದುರಿಸಲು ಗುಣಮಟ್ಟ ಕಾಯ್ದುಕೊಳ್ಳುಬೇಕಾಗುತ್ತದೆ. ಬಂಡವಾಳ ಲಭ್ಯತೆ ಜೊತೆಗೆ ಶಕ್ತಿಶಾಲಿ ಆಡಳಿತ ವ್ಯವಸ್ಥೆ, ಶಿಸ್ತುಪಾಲನೆ, ತಂತ್ರಗಾರಿಕೆ ಮುಖ್ಯ. ಡಿಜಿಟಲ್ ಬೆಳವಣಿಗೆಗಳಿಗೆ ಹೊಂದಿಕೊಳ್ಳುವಿಕೆ, ಸುಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಪೂರೈಕೆಯಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದಕ್ಕೂ ಗಮನ ಹರಿಸಬೇಕು’ ಎಂದರು.
ಸಿಐಐ ಮಂಗಳೂರು ಘಟಕದ ಅಧ್ಯಕ್ಷ ನಟರಾಜ ಹೆಗ್ಡೆ 2025–26ನೇ ಸಾಲಿನ ಕಾರ್ಯ ಚಟುವಟಿಕೆ ವಿವರ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.