
AI Image
ವಿಟ್ಲ: ಕ್ಷೌರ ಮಾಡಿಕೊಂಡು ಬರುತ್ತಿದ್ದ ವಿಷಯದಲ್ಲಿ ಇಲ್ಲಿಯ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಒಂದೇ ತರಗತಿಯ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಬುಧವಾರ ನಡೆದಿದೆ.
ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದ್ದು 17 ವರ್ಷದ ಇಬ್ಬರು ವಿದ್ಯಾರ್ಥಿಗಳಿಗೆ ವಿಟ್ಲ ನಿವಾಸಿ ಹೇಮಂತ್ (19) ಚೂರಿಯಿಂದ ಇರಿದಿದ್ದಾನೆ. ಆತನನ್ನು ಬಂಧಿಸಿದ್ದು, ಗಾಯಗೊಂಡವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನಾಗಿ ಕ್ಷೌರ ಮಾಡಿಕೊಂಡು ತರಗತಿಗೆ ಬರುತ್ತಿದ್ದ ವಿದ್ಯಾರ್ಥಿಯನ್ನು ಹೇಮಂತ್ ಗೇಲಿ ಮಾಡುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ವಿನಂತಿಸಿದ್ದರೂ ಆತ ಅದನ್ನು ಮುಂದುವರಿಸಿದ್ದು ಬುಧವಾರ ಬೆಳಿಗ್ಗೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ತರಗತಿಯೊಳಗೆ ಪರಸ್ಪರ ತಳ್ಳಾಟ ನಡೆದಿದೆ. ಅಷ್ಟರಲ್ಲಿ ಹೇಮಂತ್ ತನ್ನಲ್ಲಿದ್ದ ಚೂರಿಯಿಂದ ಹೊಟ್ಟೆಯ ಹಿಂಭಾಗಕ್ಕೆ ಇರಿದಿದ್ದಾನೆ. ತಡೆಯಲು ಹೋದ ಇನ್ನೊಬ್ಬ ವಿದ್ಯಾರ್ಥಿಯ ತೊಡೆಗೂ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.