ADVERTISEMENT

ರಾಜ್ಯದಾದ್ಯಂತ ಶುದ್ಧ ಜಲ ಅಭಿಯಾನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 16:02 IST
Last Updated 4 ಜನವರಿ 2024, 16:02 IST
ಶುದ್ಧ ಜಲ ಅಭಿಯಾನದ ಕರಪತ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು
ಶುದ್ಧ ಜಲ ಅಭಿಯಾನದ ಕರಪತ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು   

ಉಜಿರೆ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನವರಿ ತಿಂಗಳಿಡೀ ರಾಜ್ಯದಾದ್ಯಂತ ‘ಶುದ್ಧಜಲ ಅಭಿಯಾನ’ ಆಯೋಜಿಸಲಾಗಿದ್ದು, 1 ಲಕ್ಷ ಜನರಿಗೆ ಶುದ್ಧಜಲ ಬಳಕೆಯ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್‌ ತಿಳಿಸಿದ್ದಾರೆ.

‘ಶುದ್ಧಗಂಗಾ’ ಹೆಸರಲ್ಲಿ ಇದುವರೆಗೆ ರಾಜ್ಯದಲ್ಲಿ 437  ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ನಿತ್ಯ 5 ಲಕ್ಷ ಜನರು ಈ ಘಟಕಗಳಿಂದ 20 ಲಕ್ಷ ಲೀಟರ್‌ನಷ್ಟು ಶುದ್ಧ ನೀರು ಬಳಸುತ್ತಿದ್ದಾರೆ. ಶುದ್ಧಗಂಗಾ ಘಟಕಗಳಿರುವ ಪ್ರದೇಶಗಳ ಜನರಿಗೆ ನೀರಿನ ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆ, ಮನೆಗಳಿಗೆ ಭೇಟಿ ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ’ ಎಂದಿದ್ದಾರೆ.

‘ರಾಜ್ಯದ ಶೇ 60ರಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ 20ಕ್ಕಿಂತ ಹೆಚ್ಚು ನೈಟ್ರೇಟ್ ಹಾಗೂ ಶೇ 30ರಷ್ಟು ಸೂಕ್ಷ್ಮಾಣುಗಳಿಂದ ಕಲುಷಿತವಾಗಿ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಬೆಳಗಾವಿ, ಬೀದರ್, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹಾವೇರಿ, ಗದಗ, ಕೋಲಾರ, ತುಮಕೂರು, ಕೊಪ್ಪಳ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಫ್ಲೋರೈಡ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.