ADVERTISEMENT

ಶ್ರಮಿಕ ವರ್ಗಕ್ಕೆ ಆರ್ಥಿಕ ನೆರವು

ಮುಖ್ಯಮಂತ್ರಿ ಘೋಷಿಸಿದ ಪ್ಯಾಕೇಜ್‌ಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಮೇ 2020, 16:48 IST
Last Updated 7 ಮೇ 2020, 16:48 IST
ಎಂ.ಎನ್‌. ರಾಜೇಂದ್ರಕುಮಾರ್‌
ಎಂ.ಎನ್‌. ರಾಜೇಂದ್ರಕುಮಾರ್‌   

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಸ್ವಾಗತಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ರಾಜ್ಯದ ಆರ್ಥಿಕತೆ ಸಂಕಷ್ಟದಲ್ಲಿದ್ದರೂ, ಮುಖ್ಯಮಂತ್ರಿ ರಾಜ್ಯದ ಶ್ರಮಿಕ ವರ್ಗದ ನೆರವಿಗೆ ಬಂದು ಆರ್ಥಿಕ ಚೈತನ್ಯ ತುಂಬಿದ್ದಾರೆ. ಕಟ್ಟಡ ಕಾರ್ಮಿಕರು, ಮಡಿವಾಳರು, ಕ್ಷೌರಿಕರು, ಆಟೊ-ಟ್ಯಾಕ್ಸಿ ಚಾಲಕರು ಹಾಗೂ ಹೂ ಬೆಳೆಗಾರರು ಸೇರಿದಂತೆ ಸುಮಾರು 27 ಲಕ್ಷಕ್ಕೂ ಹೆಚ್ಚು ಮಂದಿಗೆ ₹1,610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿ ಶ್ರಮಿಕ ವರ್ಗದ ಹಿತ ಕಾಪಾಡಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷವಾಗಿ ನೇಕಾರರಿಗೆ ‘ರೈತ ಸಮ್ಮಾನ್’ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಯಡಿ ರಾಜ್ಯದ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ₹ 2 ಸಾವಿರ ಪರಿಹಾರ ಸಿಗಲಿದೆ. ನೇಕಾರರ ಸಾಲ ಮನ್ನಾಕ್ಕೆ ₹109 ಕೋಟಿ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿ, ನೇಕಾರ ವರ್ಗದ ಪರವಾದ ನಿಲುವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಶ್ರಮಿಕರ ಪರ ಸರ್ಕಾರ’

ಸಂಕಷ್ಟ ಎದುರಿಸುತ್ತಿರುವ ಪ್ರತಿಯೊಂದು ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಪರಿಹಾರ ಪ್ಯಾಕೇಜ್, ಸರ್ಕಾರ ಶ್ರಮಿಕ ವರ್ಗದ ಪರವಾಗಿ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಕಟ್ಟಡ ಕಾರ್ಮಿಕರು, ನೇಕಾರರು, ರೈತರು, ಮಡಿವಾಳರು, ಕ್ಷೌರಿಕರು, ರೈತರು, ಆಟೊ– ಟ್ಯಾಕ್ಸಿ ಚಾಲಕರು ಹಾಗೂ ಇತರ ಶ್ರಮಿಕ ವರ್ಗದವರಿಂದ ಅವರ ಬೇಡಿಕೆ ಈಡೇರಿಸಲು ಮನವಿಗಳು ಬಂದಿದ್ದವು. ಈ ಪರಿಹಾರ ಮೊತ್ತ ಇವರೆಲ್ಲಗರಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

‘ರಿಕ್ಷಾ ಚಾಲಕರಿಗೆ ₹ 5 ಸಾವಿರ’

ರಿಕ್ಷಾ ಚಾಲಕರಿಗೆ ₹ 5 ಸಾವಿರ ವಿಶೇಷ ಪ್ಯಾಕೇಜ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಸ್ವಾಗತಿಸಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ 1.70 ಲಕ್ಷ ಮಂದಿ ರಿಕ್ಷಾ, ಕಾರು ಚಾಲಕರಿಗೆ ಒಂದು ಬಾರಿ ₹ 5 ಸಾವಿರ ನೀಡಲು ಕ್ರಮ ಕೈಗೊಂಡಿದ್ದು, ಕನಿಷ್ಠ ₹10 ಸಾವಿರ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸಿಲ್ಲ. ಒಂದು ತಿಂಗಳ ರೇಷನ್ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದುಡಿಯುವ ವರ್ಗಕ್ಕೆ ತೊಂದರೆ ಆಗಿದ್ದು, ಈ ವರ್ಗವನ್ನು ರಕ್ಷಿಸಬೇಕು. ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

‘ಜನಪರ ಯೋಜನೆ’

ಕೊರೊನಾದಿಂದ ಕಂಗೆಟ್ಟ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಟ್ಟಡ ಕಾರ್ಮಿಕರು, ಹೂವಿನ ಬೆಳೆಗಾರರು, ನೇಕಾರರು, ಕ್ಷೌರಿಕರು, ಆಟೊ, ಟ್ಯಾಕ್ಸಿ ಚಾಲಕರಿಗೆ, ಮಡಿವಾಳರು ಸೇರಿದಂತೆ ಜನಸಾಮಾನ್ಯರಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮದು ಜನಪರ ಸರ್ಕಾರ ಎನ್ನುವುದನ್ನು ರುಜುವಾತು ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ತಿಳಿಸಿದ್ದಾರೆ.

ಕೆಲಸವಿಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಶ್ರಮಿಕ ವರ್ಗದ ಜನರಿಗೆ ಆರ್ಥಿಕ ಆಸರೆ ನೀಡುವ ಮೂಲಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.