ಮಂಗಳೂರು: ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ ಸಹಕಾರ್ಮಿಕನ ಕೊಲೆ ಪ್ರಕರಣದಲ್ಲಿ ಅಪರಾಧಿ ಕೇರಳದ ಕಣ್ಣೂರು ಜಿಲ್ಲೆಯ ಕೂವೇರಿ ಚಪ್ಪರಪಡವಿನ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್‌ಗೆ (53 ವರ್ಷ) ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಸಾದಾ ಕಾರಾಗೃಹ ವಾಸ ಹಾಗೂ ₹ 25 ಸಾವಿರ ದಂಡ ವಿಧಿಸಿದೆ.
ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿಯ ಮಂಗಳಾ ಬೋಟ್ ಯಾರ್ಡ್‌ನಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡಿದ್ದ ಬಿನು.ಜಿ ಮತ್ತು ಬಡಗಿ ಜಾನ್ಸನ್ ಎನ್.ವಿ ನಡುವೆ 2023ರ ಡಿ.10ರಂದು ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಬಿನುವಿನ ಎದೆಗೆ ಕಬ್ಬಿಣದ ಉಳಿಯಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಆಗಿನ ಪ್ರಭಾರ ಇನ್‌ಸ್ಪೆಕ್ಟರ್ ಸಂದೀಪ್.ಜಿ.ಎಸ್ ತನಿಖೆ ಆರಂಭಿಸಿದ್ದರು. ಇನ್‌ಸ್ಪೆಕ್ಟರ್ ಮಂಜುನಾಥ ಎಂ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಜಾನ್ಸನ್ ಎನ್.ವಿಯನ್ನು ಪೊಲೀಸರು ಘಟನೆ ನಡೆದಾಗಲೇ ಬಂಧಿಸಿದ್ದು, 3 ವರ್ಷ 2 ತಿಂಗಳಿನಿಂದ ಆತ ಜೈಲಿನಲ್ಲಿದ್ದ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.