ADVERTISEMENT

ದೇಶದಾದ್ಯಂತ 35 ಬೀಚ್‌ಗಳ ಸ್ವಚ್ಛತೆ ಗುರಿ

ಅಂತರರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 16:28 IST
Last Updated 23 ಸೆಪ್ಟೆಂಬರ್ 2021, 16:28 IST
ಬೀಚ್‌ ಸ್ವಚ್ಛತೆಯಲ್ಲಿ ನಿರತರಾಗಿರುವ ಸ್ವಯಂಸೇವಕರು (ಸಾಂದರ್ಭಿಕ ಚಿತ್ರ)
ಬೀಚ್‌ ಸ್ವಚ್ಛತೆಯಲ್ಲಿ ನಿರತರಾಗಿರುವ ಸ್ವಯಂಸೇವಕರು (ಸಾಂದರ್ಭಿಕ ಚಿತ್ರ)   

ಮಂಗಳೂರು: ಕಡಲ ತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜಲಚರಗಳ ಅಸ್ತಿತ್ವಕ್ಕೆ ಕುತ್ತು ಬರುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕಡಲ ತಡಿಯ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತಿದೆ. 30 ವರ್ಷಗಳ ಹಿಂದೆ ಅಮೆರಿಕದಲ್ಲಿ ಸೆ. 24 ರಂದು ಆರಂಭವಾದ ಕಡಲ ತೀರ ಸ್ವಚ್ಛತಾ ದಿನವನ್ನು ಇದೀಗ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಚೆನ್ನೈನ ರಾಷ್ಟ್ರೀಯ ಕಡಲ ಸಂಶೋಧನಾ ಕೇಂದ್ರ (ಎನ್‌ಸಿಸಿಆರ್‌) ಹಾಗೂ ಕೇಂದ್ರ ಭೂ ವಿಜ್ಞಾನ ಸಚಿವಾಲಯಗಳ ವತಿಯಿಂದ ಈ ವರ್ಷದ ಅಂತರರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನದ ಅಂಗವಾಗಿ ದೇಶದಾದ್ಯಂತ ಒಟ್ಟು 35 ಬೀಚ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ನಡೆಯುವ ಅಭಿಯಾನದಲ್ಲಿ ಈ ಬೀಚ್‌ಗಳನ್ನು ಕಸಮುಕ್ತ ಮಾಡುವ ಗುರಿ ಹೊಂದಲಾಗಿದೆ.

ಈ ಜವಾಬ್ದಾರಿಯನ್ನು ನಗರದ ಮೀನುಗಾರಿಕೆ ಕಾಲೇಜಿಗೆ ಎನ್‌ಸಿಸಿಆರ್ ವಹಿಸಿದೆ. ಇದರ ಅಂಗವಾಗಿ ಮೀನುಗಾರಿಕೆ ಕಾಲೇಜು ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಡಲ ಜೀವವೈವಿಧ್ಯದ ರಕ್ಷಣೆಗೆ ತೀರದ ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಿಳಿಸಿಕೊಡಲಾಗುತ್ತಿದೆ. ಈ ಮೂಲಕ ಮೀನು ಸೇರಿದಂತೆ ಜಲಚರಗಳ ಅಭಿವೃದ್ಧಿಗೆ ಕೈಜೋಡಿಸುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಮೀನುಗಾರಿಕೆ ಕಾಲೇಜಿನ ಡೀನ್‌ ಡಾ.ಎ. ಸೆಂಥಿಲ್‌ ವೇಲ್‌ ತಿಳಿಸಿದ್ದಾರೆ.

ADVERTISEMENT

ಮಾಲಿನ್ಯ ನಿಯಂತ್ರಣದ ಉದ್ದೇಶ: ಕಡಲ ತೀರದ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಮೀನುಗಾರಿಕೆ ಕಾಲೇಜು, ಪ್ಲಾಸ್ಟಿಕ್‌ನ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದಕ್ಕಾಗಿ ಐದು ‘ಆರ್‌’ಗಳ ಸೂತ್ರವನ್ನು ಮುಂದಿಟ್ಟಿದೆ.

ರೆಫ್ಯೂಸ್‌ (ನಿರಾಕರಿಸು): ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು, ಆಹಾರವನ್ನು ಪೂರೈಸುವ ಕ್ಯಾರಿಬ್ಯಾಗ್‌ಗಳು, ಪೆನ್ನು, ಆಟಿಕೆಗಳನ್ನು ಕಡಲ ತೀರದಲ್ಲಿ ಬಿಸಾಕುವುದನ್ನು ನಿರಾಕರಿಸಬೇಕು.

ರೆಡ್ಯೂಸ್ (ಕಡಿತಗೊಳಿಸು): ಪ್ಲಾಸ್ಟಿಕ್‌ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬೇಕು. ಇದಕ್ಕಾಗಿ ಗಾಜು, ಇನ್ನಿತರ ಸುರಕ್ಷಿತ ವಸ್ತುಗಳಿಂದ ತಯಾರಿಸಿದ ಬಾಟಲಿ, ಟಿಫಿನ್‌ ಬಾಕ್ಸ್‌, ಮಗ್ ಹಾಗೂ ಕಪ್‌ಗಳ ಬಳಕೆಯನ್ನು ಹೆಚ್ಚಿಸಬೇಕು.

ರಿ ಯೂಸ್ (ಮರುಬಳಕೆ): ನಮ್ಮಲ್ಲಿರುವ ಪ್ಲಾಸ್ಟಿಕ್‌ನ ಮರು ಬಳಕೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್‌ ಡಬ್ಬಗಳನ್ನು ಕಸದ ಬುಟ್ಟಿ, ಹೂದಾಣಿಗಳನ್ನಾಗಿ ಪರಿವರ್ತಿಸುವ ಮೂಲಕ ಮರು ಬಳಕೆ ಮಾಡಬೇಕು.

ರಿಸೈಕಲ್ (ಸಂಸ್ಕರಿಸು): ಮರುಬಳಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಸ್ಕರಿಸಿ, ಅವುಗಳಿಂದ ಉಪಯೋಗವಾಗುವ ವಸ್ತುಗಳನ್ನು ತಯಾರಿಸುವುದು. ಇದಕ್ಕಾಗಿ ಇಂತಹ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಸ್ಕರಣಾ ಘಟಕಗಳಿಗೆ ರವಾನಿಸಬೇಕು.

ರಿಸ್ಪಾನ್ಸಿಬಿಲಿಟಿ (ಜವಾಬ್ದಾರಿ): ಕುಟುಂಬ, ಶಾಲೆ, ನೆರೆಹೊರೆ, ಕಚೇರಿ, ಆಸ್ಪತ್ರೆ, ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಪ್ರತಿಯೊಬ್ಬರೂ ನಾಗರಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು.

ಜಾಗೃತಿ ಕಾರ್ಯಕ್ರಮ

ತಣ್ಣೀರು ಬಾವಿ ಬೀಚ್‌ನಲ್ಲಿ ಶುಕ್ರವಾರ ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮಂಗಳೂರು ಮಹಾನಗರ ಪಾಲಿಕೆಯು ಸಹಕಾರ ನೀಡುತ್ತಿದ್ದು, ಕಾರ್ಯಕ್ರಮಕ್ಕೆ ಅಗತ್ಯ ವ್ಯವಸ್ಥೆ ಮಾಡುತ್ತಿದೆ.

ಕಾಲೇಜಿನ ಎಲ್ಲ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ. ಕಾಲೇಜಿನ ನಿವೃತ್ತ ಡೀನ್‌ ಡಾ.ಎಸ್‌.ಎಂ. ಶಿವಪ್ರಕಾಶ್‌ ಅತಿಥಿಗಳಾಗಿ ಭಾಗವಹಿಸಲಿದ್ದು, ಮೀನುಗಾರಿಕೆ ಆರ್ಥಿಕತೆ ವಿಭಾಗದ ಮುಖ್ಯಸ್ಥ ಡಾ.ಎಸ್‌.ಆರ್‌. ಸೋಮಶೇಖರ್‌ ಸಂಚಾಲಕರಾಗಿದ್ದಾರೆ. ಎನ್‌ಎಸ್‌ಎಸ್‌ ಅಧಿಕಾರಿ ಮನೋಜ್‌ಕುಮಾರ ಸಹ ಸಂಚಾಲಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.