AP ಅಬೂಬಕರ್ ಮುಸ್ಲಿಯಾರ್
ಉಳ್ಳಾಲ (ದಕ್ಷಿಣ ಕನ್ನಡ): ‘ನಾವೆಲ್ಲರೂ ಒಂದೇ ಭಾರತ ಮಾತೆಯ ಮಕ್ಕಳು ಎಂಬುದನ್ನು ಮರೆಯಬಾರದು. ಸೌಹಾರ್ದತೆಗೆ ಹೆಸರುವಾಸಿಯಾದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುವ ಬದಲು, ಭಿನ್ನಾಭಿಪ್ರಾಯಗಳನ್ನು ಮರೆತು, ಪರಸ್ಪರ ಪ್ರೀತಿ - ಗೌರವದಿಂದ ಬದುಕುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಹಾಗೂ ಉಳ್ಳಾಲ ಖಾಜಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಆಶಿಸಿದ್ದಾರೆ.
‘ಪ್ರಜಾವಾಣಿ‘ಯ ಜುಲೈ 20ರ ಸಂಚಿಕೆಯಲ್ಲಿ ‘ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ’ ಶೀರ್ಷಿಕೆಯಲ್ಲಿ ಪ್ರಕಟವಾದ ಒಳನೋಟಕ್ಕೆ ಸಂಬಂಧಿಸಿದಂತೆ ಹಾಗೂ ಕರಾವಳಿಯ ಸೌಹಾರ್ದತೆಯ ಕುರಿರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಇತ್ತೀಚೆಗೆ ಕರಾವಳಿ ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲವೊಂದು ಘಟನೆಗಳು ನಡೆದಿದ್ದು ದುಃಖಕರ. ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವುದು ಖಂಡನೀಯ. ಯಾವುದೇ ಧರ್ಮವು ಹಿಂಸೆಯನ್ನು ಸಮರ್ಥಿಸದೆ, ಎಲ್ಲಾ ಧರ್ಮಗಳೂ ಪ್ರೀತಿ, ಕರುಣೆ ಮತ್ತು ಸಹಬಾಳ್ವೆಯನ್ನು ಬೋಧಿಸುತ್ತವೆ’ ಎಂದಿದ್ದಾರೆ.
‘ಯಾವುದೇ ಧರ್ಮವು ಜನರನ್ನು ಪರಸ್ಪರ ಕೋಮು ಪ್ರಚೋದನೆಗೆ ಒಳಗಾಗಿಸುವುದಿಲ್ಲ. ಮೊಹಮ್ಮದ ಪೈಗಂಬರರು ಕಲಿಸುವ ಮೊದಲ ಪಾಠವೇ 'ಕರುಣೆ ತೋರುವವರ ಮೇಲೆ ಅಲ್ಲಾಹನು ಕರುಣೆ ತೋರುವನು. ಧರೆಯ ಸಕಲ ಮನುಷ್ಯ - ಮನುಷ್ಯೇತರ ಜೀವಿಗಳ ಮೇಲೆ ಕರುಣೆ ತೋರಿರಿ. ಆಗ ಆಕಾಶ ವಾಹಕರು ನಿಮ್ಮ ಮೇಲೆ ಕರುಣೆ ತೋರುವರು' ಎಂದಾಗಿದೆ’ ಎಂದು ಅವರು ಹೇಳಿದ್ದಾರೆ.
‘ಇನ್ನು ದ್ವೇಷಕಾರುವ ಜನರನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಿ, ಸೌಹಾರ್ದದ ಸೇತುವೆಗಳನ್ನು ನಿರ್ಮಿಸಬೇಕು. ನಮ್ಮ ಆಚರಣೆಗಳು ನಮ್ಮನ್ನು ಒಗ್ಗೂಡಿಸುವ ಶಕ್ತಿಯಾಗಬೇಕೇ ಹೊರತು ಕೋಮುಪ್ರಚೋದನೆಗೆ ದಾರಿಯಾಗಬಾರದು. ಇನ್ನು ಕೋಮು ಸಾಮರಸ್ಯ ಅನ್ನುವುದು ಕೇವಲ ಒಂದು ಘೋಷಣೆಯಾಗದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು’ ಎಂದಿದ್ದಾರೆ.
‘ನಮ್ಮ ಯುವಕರು ಯಾವುದೇ ಪ್ರಚೋದನೆಗಳಿಗೆ ಬಲಿಯಾಗದೆ, ಸಮಾಜದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾನೂನನ್ನು ನಮ್ಮ ಕೈಗೆ ತೆಗೆದುಕೊಳ್ಳದೆ, ನ್ಯಾಯ ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಎಲ್ಲ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಭಾರತದ ಸಂವಿಧಾನದ ಆಶಯದಂತೆ ಪರಸ್ಪರ ಸೌಹಾರ್ದಯುತವಾಗಿ ಜೀವಿಸಿ ಕರಾವಳಿ ಕರ್ನಾಟಕವನ್ನು ಮತ್ತೆ ಜೀವಗೊಳಿಸೋಣ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.