ADVERTISEMENT

ಕೇಂದ್ರದಲ್ಲಿ ಸಹಕಾರ ಸಚಿವಾಲಯ: ಕರಾವಳಿಯಲ್ಲಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 11:46 IST
Last Updated 8 ಜುಲೈ 2021, 11:46 IST

ಮಂಗಳೂರು: ಕೇಂದ್ರ ಸರ್ಕಾರದಿಂದ ನೂತನ ಸಹಕಾರ ಸಚಿವಾಲಯ ಆರಂಭಿಸಿರುವುದಕ್ಕೆ ಕರಾವಳಿಯಲ್ಲಿ ಹರ್ಷ ವ್ಯಕ್ತವಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವವಿದ್ದು, ದೇಶದಲ್ಲಿ ಕಾನೂನು ಬದ್ಧವಾಗಿ ಸಹಕಾರ ಚಳವಳಿ ಪ್ರಾರಂಭವಾಗಿ 117 ವರ್ಷಗಳು ಕಳೆದಿವೆ. ಅನೇಕ ಏಳು– ಬೀಳುಗಳ ಮಧ್ಯೆ ಸಹಕಾರ ಕ್ಷೇತ್ರವು ಗಣನೀಯ ಸಾಧನೆ ಮಾಡಿದೆ. ದೇಶದ 6.30ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದ್ದು, ಗ್ರಾಮೀಣ ಆರ್ಥಿಕತೆಯನ್ನು ನಿಯಂತ್ರಿಸುವ ಮಟ್ಟಿಗೆ ಬೆಳೆದು ನಿಂತಿದೆ. ದೇಶದ ಆರ್ಥಿಕತೆಯಲ್ಲೂ ಸಹಕಾರ ಕ್ಷೇತ್ರದ ಪಾಲು ಶೇ 40ರಷ್ಟಿದೆ. ಇಂತಹ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಿರುವುದು ಐತಿಹಾಸಿಕ ನಿರ್ಣಯ ಎಂದು ಸಹಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ರಸಾದ ಮಡ್ತಿಲ್ ಹಾಗೂ ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು ತಿಳಿಸಿದ್ದಾರೆ.

ಸ್ವಾತಂತ್ರ್ಯದ ನಂತರ ಸಹಕಾರ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲು ಸಹಕಾರ ಖಾತೆ ಆರಂಭಿಸಬೇಕಿತ್ತು. ಆದರೆ ಆಗಿರಲಿಲ್ಲ. ಸಹಕಾರ ಭಾರತಿಯು ನಿರಂತರವಾಗಿ ಪ್ರತ್ಯೇಕ ಸಚಿವಾಲಯಕ್ಕೆ ಬೇಡಿಕೆ ಸಲ್ಲಿಸುತ್ತಲೇ ಬಂದಿತ್ತು. ಇದೀಗ ಬೇಡಿಕೆಯನ್ನು ಪರಿಗಣಿಸಿ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯ ಸ್ಥಾಪಿಸಿರುವುದು ಸಹಕಾರ ಚಳವಳಿಯನ್ನು ತಳಮಟ್ಟದವರೆಗೆ ವಿಸ್ತರಿಸಲು ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಸಹಕಾರ ರಂಗದಲ್ಲಿ ಸಂಚಲನ:ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹೊಸ ಸಹಕಾರ ಸಚಿವಾಲಯ ರಚನೆಯಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಸಹಕಾರ ರಂಗಕ್ಕಾಗಿ ಪ್ರತ್ಯೇಕ ಸಚಿವಾಲಯ ರಚನೆ ಮಾಡಿರುವುದು ಸ್ವಾಗತಾರ್ಹ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್‌ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿರುವ ಸಹಕಾರ ರಂಗದಿಂದ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನಿರೀಕ್ಷಿಸಬಹುದಾಗಿದೆ. ನೂತನ ಸಚಿವಾಲಯವು ಈ ನಿಟ್ಟಿನಲ್ಲಿ ದೇಶದ ಸಹಕಾರಿ ಸಂಘ-ಸಂಸ್ಥೆಗಳಿಗೆ ಆನೆಬಲವನ್ನು ತುಂಬಲಿದೆ ಎಂದು ಹೇಳಿದ್ದಾರೆ.

ಸ್ವಾಯತ್ತತೆಗೆ ಅನುಕೂಲ: ಕೇಂದ್ರ ಸರ್ಕಾರದಲ್ಲಿ ಪ್ರಥಮ ಬಾರಿ ಸಹಕಾರಿ ಸಚಿವಾಲಯ ಸ್ಥಾಪಿಸಿದ್ದು, ಸಹಕಾರಿ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಸ್ವಾಗತಾರ್ಹ ಸಂವಿಧಾನದ 97ನೇ ತಿದ್ದುಪಡಿಯಂತೆ ರಾಜ್ಯಗಳ ಸಹಕಾರಿ ಕಾಯ್ದೆಯಲ್ಲಿ ಸಂಘಗಳ ಸ್ವಾಯತ್ತತೆ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಕರಾವಳಿ ಭಾಗದ ಜನರಲ್ಲಿ ಹರ್ಷವನ್ನು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.