ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೋಮುಹಿಂಸೆ ನಿಗ್ರಹಿಸಲು ಸರ್ಕಾರ ಹೊಸದಾಗಿ ಕಾರ್ಯಪಡೆ ರಚಿಸಿದ್ದು, ಇದರ ಕಾರ್ಯಾಚರಣೆಗೆ ಇದೇ 13ರಂದು ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ.
ಡಿಐಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿರುವ ಈ ಕಾರ್ಯಪಡೆಯಲ್ಲಿ ಒಟ್ಟು 248 ಸಿಬ್ಬಂದಿ ಹಾಗೂ ಮೂರು ಕಂಪನಿಗಳು ಇರಲಿವೆ. ಸದ್ಯಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಈ ವಿಶೇಷ ಕಾರ್ಯಪಡೆಯ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಇದೇ 13 ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಈ ಕಾರ್ಯಪಡೆಯನ್ನು ಉದ್ಘಾಟಿಸಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
‘ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದಕ್ಕೆ ವಿಶೇಷ ಕಾರ್ಯಪಡೆ ಸಜ್ಜಾಗಿದೆ. ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಕಾರ್ಯಪಡೆಯ ಕೇಂದ್ರ ಕಚೇರಿ ಮಂಗಳೂರಿನಲ್ಲೇ ಇರಲಿದೆ. ಕಾರ್ಯಪಡೆಯಲ್ಲಿ ತಲಾ 80 ಸಿಬ್ಬಂದಿಯನ್ನು ಒಳಗೊಂಡ ಮೂರು ಕಂಪನಿಗಳು ಇರಲಿವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ತಲಾ ಒಂದು ಕಂಪನಿಗಳನ್ನು ನಿಯೋಜಿಸಲಾಗುತ್ತದೆ’ ಎಂದು ಸುಧೀರ್ ಕುಮಾರ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಗುಪ್ತವಾರ್ತೆ ಘಟಕ: ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗೆ ಸಂಬಂಧಿಸಿ ಗುಪ್ತ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಒಳಗೊಂಡ ಗುಪ್ತವಾರ್ತೆ ಘಟಕವನ್ನು ಈ ವಿಶೇಷ ಕಾರ್ಯಪಡೆ ಹೊಂದಿರಲಿದೆ. ಸಂಭಾವ್ಯ ಕೋಮು ಹಿಂಸಾಚಾರ ತಪ್ಪಿಸಲು, ಕೋಮು ಗಲಭೆಯಂತಹ ಸಂಚುಗಳನ್ನು ವಿಫಲಗೊಳಿಸುವಲ್ಲಿ ಈ ಘಟಕವು ಮಹತ್ವದ ಪಾತ್ರ ನಿಭಾಯಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
‘ಕೋಮು ಹಿಂಸಾಚಾರದಲ್ಲಿ ತೊಡಗುವ ಗುಂಪುಗಳನ್ನು ನಿಯಂತ್ರಿಸಲೆಂದೇ ವಿಶೇಷ ತರಬೇತಿ ಪಡೆದ ಸಿಬ್ಬಂದಿ ಈ ಕಾರ್ಯಪಡೆಯಲ್ಲಿ ಇರಲಿದ್ದಾರೆ. ಕೋಮುಗಲಭೆ ಸಂಭವಿಸಿದರೆ, ಅದರ ನಿಯಂತ್ರಣಕ್ಕೆ ಈ ಕಾರ್ಯಪಡೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಿದ್ದೇವೆ. ದ್ವೇಷ ಭಾಷಣ ಮಾಡುವ, ಕೋಮು ಹಿಂಸಾಚಾರಕ್ಕೆ ಸಂಚು ರೂಪಿಸಿದ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಚಟುವಟಿಕೆ ಮೇಲೆ ವಿಶೇಷ ಕಾರ್ಯಪಡೆಯ ಸಿಬ್ಬಂದಿ ನಿಗಾ ಇಡಲಿದ್ದಾರೆ’ ಎಂಬುದು ಮೂಲಗಳ ವಿವರಣೆ.
ನಕ್ಸಲ್ ನಿಗ್ರಹ ಪಡೆಯಲ್ಲಿದ್ದ (ಎಎನ್‌ಎಫ್) 656 ಸಿಬ್ಬಂದಿಯಲ್ಲಿ 248 ಸಿಬ್ಬಂದಿಯನ್ನು ಕೋಮು ಹಿಂಸೆ ನಿಗ್ರಹ ಪಡೆಗೆ ನಿಯೋಜಿಸಲಾಗಿದೆ.
ಕೋಮು ಹಿಂಸೆ ನಿಗ್ರಹ ಪಡೆಯ ಕಾರ್ಯಗಳು...
* ದ್ವೇಷ ಭಾಷಣ ಉದ್ರೇಕಕಾರಿ ಚಟುವಟಿಕೆ ಮೇಲೆ ನಿಗಾ
* ಕೋಮು ಹಿಂಸಾಚಾರ ಸಂಬಂಧಿ ಚಟುವಟಿಕೆ ಮೇಲೆ ಕಣ್ಗಾವಲು
* ವಿಶ್ವಾಸ ವೃದ್ಧಿಸುವ ಕ್ರಮಗಳನ್ನು ಕೈಗೊಳ್ಳುವುದು
* ಮೂಲಭೂತವಾದಿ ಚಟುವಟಿಕೆ ಗುರುತಿಸಿ ನಿಗ್ರಹಿಸುವುದು
ಎಎನ್‌ಎಫ್ ಮುಂದುವರಿಕೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸಲು ರಾಜ್ಯ ಸರ್ಕಾರವು 2005ರಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು (ಎಎನ್‌ಎಫ್) ರಚಿಸಿತ್ತು. ಎಎನ್‌ಎಫ್‌ನಲ್ಲಿ 667 ಮಂಜೂರಾದ ಹುದ್ದೆಗಳಿವೆ. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಆರು ಮಂದಿ ನಕ್ಸಲರು ಶರಣಾದ ಬಳಿಕ ಎಎನ್‌ಎಫ್ ಅನ್ನು ವಿಸರ್ಜಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ಕುರಿತು 2025–26ನೇ ಸಾಲಿನ ಬಜೆಟ್ ಭಾಷಣದಲ್ಲೂ ಉಲ್ಲೇಖಿಸಲಾಗಿತ್ತು. ಛತ್ತೀಸಗಢ ಜಾರ್ಖಂಡ್ ರಾಜ್ಯಗಳ ಕೆಲವು ನಕ್ಸಲರು ಕರ್ನಾಟಕ ಕೇರಳ ತಮಿಳುನಾಡು ಗಡಿ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿರುವುದರಿಂದ ಎಎನ್‌ಎಫ್ ಅನ್ನು ಕನಿಷ್ಠ 3 ವರ್ಷವಾದರೂ ಮುಂದುವರಿಸಬೇಕು ಎಂದು ಡಿಜಿಪಿ ಮತ್ತು ಐಜಿಪಿ ಅವರು ಸಲಹೆ ನೀಡಿದ್ದರು. ಹಾಗಾಗಿ ಎಎನ್ಎಫ್ ಅನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಕೋಮು ಹಿಂಸೆ ನಿಗ್ರಹ ಪಡೆಗೆ ಸಿಬ್ಬಂದಿಯನ್ನು ನಿಯೋಜಿಸಿದ ಬಳಿಕ ಉಳಿಯುವ 376 ಹುದ್ದೆಗಳು ಎಎನ್‌ಎಫ್‌ನಲ್ಲಿ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.