ADVERTISEMENT

ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಬರಹ:BJP ಮಹಿಳಾ ಮೋರ್ಚಾದಿಂದ ದೂರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:12 IST
Last Updated 9 ಜನವರಿ 2026, 3:12 IST
ಭಾಗೀರಥಿ ಮುರುಳ್ಯ 
ಭಾಗೀರಥಿ ಮುರುಳ್ಯ    

ಮಂಗಳೂರು: ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಕುರಿತು ಅವಹೇಳನಕಾರಿ ಸಂದೇಶವನ್ನು ಫೇಸ್‌ಬುಕ್‌ನ ‘ಬಿಲ್ಲವ ಸಂದೇಶ’ ಖಾತೆಯಲ್ಲಿ ಪ್ರಕಟಿಸಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಸದಾನಂದ ಬಂಟ್ವಾಳ ಎಂಬುವರು ದೂರು ನೀಡಿದ್ದಾರೆ.

‘ಮೊಬೈಲ್‌ನಲ್ಲಿ ಫೇಸ್ ಬುಕ್ ಖಾತೆಯನ್ನು ಬುಧವಾರ ಗಮನಿಸಿದಾಗ ‘ಬಿಲ್ಲವ ಸಂದೇಶ್’ ಎಂಬ ಫೇಸ್ ಬುಕ್ ಖಾತೆಯಲ್ಲಿ ಭಾಗೀರಥಿ ಅವರ ಫೋಟೊವನ್ನು ಬಳಸಿ, ಅವಹೇಳನಕಾರಿ ಬರಹ ಪ್ರಕಟಿಸಿ, ಅಪಪ್ರಚಾರ ಮಾಡಿರುವುದು ಗಮನಕ್ಕೆ ಬಂದಿದೆ’ ಎಂದು ಸದಾನಂದ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಶಾಸಕಿ ಭಾಗಿರಥಿ ಮುರುಳ್ಯ ಅವರ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದನ್ನು ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್ ಖಂಡಿಸಿದ್ದಾರೆ. 

ADVERTISEMENT

‘ಶೋಷಿತ ಸಮುದಾಯದಿಂದ ಬಂದು ಸಜ್ಜನಿಕೆಯಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಶಾಸಕಿ ಭಾಗಿರಥಿ ಮುರುಳ್ಯ ವಿರುದ್ಧ ಕೀಳುಮಟ್ಟದ ಸಂದೇಶ ಪ್ರಕಟಿಸಿರುವುದು ವಿಕೃತ ಮನಸ್ಸಿನ ಅತಿರೇಕರ ವರ್ತನೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಸಂದೇಶ  ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ಬ್ರಿಜೇಶ್‌ ಚೌಟ  ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.