ADVERTISEMENT

ಮಂಗಳೂರು | ಪ್ರೀ ಪೇಯ್ಡ್ ರಿಕ್ಷಾ: ಪ್ರಯಾಣಿಕರಿಗೆ ಬರೆ

₹5 ಟೋಕನ್‌ ದರಕ್ಕೆ ಆಕ್ಷೇಪ, ಪೊಲೀಸ್ ಇಲಾಖೆಯಿಂದ ನಿರ್ವಹಣೆಗೆ ಆಗ್ರಹ

ಸಂಧ್ಯಾ ಹೆಗಡೆ
Published 17 ಜೂನ್ 2025, 6:22 IST
Last Updated 17 ಜೂನ್ 2025, 6:22 IST
ಮಂಗಳೂರಿನ ಜಂಕ್ಷನ್ ರೈಲು ನಿಲ್ದಾಣದಲ್ಲಿನ ಪ್ರೀ ಪೇಯ್ಡ್ ರಿಕ್ಷಾ ಕೌಂಟರ್ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.
ಮಂಗಳೂರಿನ ಜಂಕ್ಷನ್ ರೈಲು ನಿಲ್ದಾಣದಲ್ಲಿನ ಪ್ರೀ ಪೇಯ್ಡ್ ರಿಕ್ಷಾ ಕೌಂಟರ್ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.   

ಮಂಗಳೂರು: ನಗರದ ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಇರುವ ಪ್ರೀ ಪೇಯ್ಡ್ ಆಟೊರಿಕ್ಷಾ ಕೌಂಟರ್‌ಗಳು ದೂರದ ಊರಿನಿಂದ ರೈಲಿನಲ್ಲಿ ಪ್ರಯಾಣಿಸಿ ಬರುವವರಿಗೆ ಮನೆ ತಲುಪಲು ಆಸರೆಯಾಗಿವೆ. ಆದರೆ, ಈ ಕೌಂಟರ್‌ಗಳ ಕಾರ್ಯ ನಿರ್ವಹಣೆ ಬಗ್ಗೆ ಪ್ರಯಾಣಿಕರ ಆಕ್ಷೇಪ ಹೆಚ್ಚುತ್ತಲೇ ಇದೆ. ‌

ಸೆಂಟ್ರಲ್ ಹಾಗೂ ಜಂಕ್ಷನ್ ಎರಡೂ ಕಡೆಗಳಲ್ಲೂ ಪ್ರೀ ಪೇಯ್ಡ್ ರಿಕ್ಷಾ ಕೌಂಟರ್‌ಗಳನ್ನು ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದಾರೆ. ₹5 ಹಣ ಕೊಟ್ಟು ಟೋಕನ್ ಪಡೆದು, ರಿಕ್ಷಾ ನಿಲ್ದಾಣದಿಂದ ತಲುಪುವ ಸ್ಥಳದ ದರ ನೀಡಬೇಕು. ಬೆಂಗಳೂರು, ಮೈಸೂರು, ರಾಜ್ಯದ ಬೇರೆ ಕಡೆಗಳಲ್ಲಿ ಇದೇ ಮಾದರಿಯ ಕೌಂಟರ್‌ಗಳು ಇದ್ದರೂ, ಅಲ್ಲಿ ಟೋಕನ್ ದರ ₹1 ಅಥವಾ ₹2 ಇದೆ. ಇಲ್ಲಿ ಮಾತ್ರ ಯಾಕೆ ಈ ದರ ಎಂಬುದು ಪ್ರಯಾಣಿಕರ ಪ್ರಶ್ನೆ. ‌

‘ಪ್ರತಿದಿನ 20ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ಅದರಲ್ಲಿ ಬರುವ ಪ್ರಯಾಣಿಕರಲ್ಲಿ ಶೇ 80ಕ್ಕೂ ಹೆಚ್ಚು ಜನರು ರಿಕ್ಷಾವನ್ನೇ ಅವಲಂಬಿಸುತ್ತಾರೆ. ಪ್ರತಿ ಟೋಕನ್‌ಗೆ ಅಧಿಕ ದರ ಪಡೆಯುವ ಅಗತ್ಯ ಇದೆಯೇ? ಅಲ್ಲದೆ, ಜಂಕ್ಷನ್‌ನಿಂದ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಸಾಮಾನ್ಯ ರಿಕ್ಷಾದಲ್ಲಿ ಮೀಟರ್‌ ಹಾಕಿ ಬಂದರೆ ಅಂದಾಜು ₹118 ಆಗುತ್ತದೆ, ಪ್ರೀ ಪೇಯ್ಡ್ ರಿಕ್ಷಾದಲ್ಲಿ ಬಂದರೆ ₹160 ನೀಡಬೇಕಾಗುತ್ತದೆ. ಯಾಕಾಗಿ ಈ ದರ ವ್ಯತ್ಯಾಸ ಆಗುತ್ತದೆ’ ಎಂದು ಪ್ರಯಾಣಿಕರೊಬ್ಬರು ಪ್ರಶ್ನಿಸಿದರು.

ADVERTISEMENT

‘ರಾಜ್ಯದ ಬೇರೆ ಭಾಗಗಳಲ್ಲಿ ಸಂಚಾರಿ ಪೊಲೀಸರು ಪ್ರೀ ಪೇಯ್ಡ್ ಕೌಂಟರ್ ನಿರ್ವಹಣೆ ಮಾಡುತ್ತಾರೆ. ಅದೇ ವ್ಯವಸ್ಥೆಯನ್ನು ಮಂಗಳೂರಿನಲ್ಲೂ ಜಾರಿಗೆ ತರಬೇಕು. ಜೊತೆಗೆ, ಕೆಎಸ್‌ಆರ್‌ಟಿಸಿಯವರು ಜಂಕ್ಷನ್‌ನಿಂದ ಮಂಗಳೂರು ನಗರಕ್ಕೆ ನರ್ಮ್ ಬಸ್ ಓಡಿಸಬೇಕು. ಈಗ ಬಸ್ ಇದ್ದರೂ, ಸುತ್ತು ಬಳಸಿ ಅದು ನಗರ ತಲುಪುತ್ತದೆ. ಹೀಗಾಗಿ, ದೂರದಿಂದ ಪ್ರಯಾಣಿಸಿ ಬರುವವರಿಗೆ ಇದು ಅನುಕೂಲವಲ್ಲ’ ಎನ್ನುತ್ತಾರೆ ಮುಂಬೈ– ಮಂಗಳೂರು ನಡುವೆ ಆಗಾಗ ಪ್ರಯಾಣ ಮಾಡುವ ಅಮೃತ್ ಗಂಜಿಮಠ.

‘ಜಂಕ್ಷನ್‌ನಿಂದ ಪಡೀಲ್, ನಾಗುರಿ, ಪಂಪ್‌ವೆಲ್ ಮಾರ್ಗವಾಗಿ ಹಂಪನಕಟ್ಟೆ ತಲುಪುವ ಬಸ್‌ ಇದ್ದರೆ ಸಾರ್ವಜನಿಕರಿಗೆ ಅನುಕೂಲ. ಜಿಲ್ಲಾಧಿಕಾರಿ ಕಚೇರಿ ಪಡೀಲ್‌ಗೆ ಸ್ಥಳಾಂತರಗೊಂಡಿರುವ ಕಾರಣ ಅಲ್ಲಿಗೆ ತೆರಳುವವರೂ ಈ ಬಸ್ ಅನ್ನು ಅವಲಂಬಿಸಬಹುದು. ರೈಲ್ವೆ ನಿಲ್ದಾಣದಲ್ಲಿ ಬಸ್‌ ವೇಳಾಪಟ್ಟಿ ಹಾಕಿಲ್ಲ. ಬಸ್ ಟ್ರ್ಯಾಕ್ ಮಾಡುವ ಆ್ಯಪ್‌ ಕೂಡ ಅಭಿವೃದ್ಧಿಪಡಿಸಿಲ್ಲ. ಜನರು ಮಾಹಿತಿ ಕೊರತೆಯಿಂದಾಗಿ ರಿಕ್ಷಾಗಳನ್ನೇ ಆಶ್ರಯಿಸಬೇಕಾಗಿದೆ’ ಎನ್ನುತ್ತಾರೆ ಅವರು.

ಪ್ರೀ ಪೇಯ್ಡ್ ರಿಕ್ಷಾ ಕೌಂಟರ್‌ಗಳು ದಿನದ 24 ತಾಸು ಕಾರ್ಯ ನಿರ್ವಹಣೆ ಮಾಡಬೇಕು ಮತ್ತು ಇದನ್ನು ಪೊಲೀಸ್ ಇಲಾಖೆ ನಿರ್ವಹಣೆ ಮಾಡಬೇಕು ಎಂಬುದು ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿದೆ ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್‌ ಹೆಗ್ಡೆ.

‘ನಿರ್ವಹಣೆಗೆ ಸಿಬ್ಬಂದಿ, ಮುದ್ರಿತ ಚೀಟಿಯ ವೆಚ್ಚವನ್ನು ಕೌಂಟರ್‌ ನೋಡಿಕೊಳ್ಳುವವರೇ ನಿರ್ವಹಿಸಬೇಕಾಗುತ್ತದೆ. ಅದಕ್ಕಾಗಿ ಟೋಕನ್ ದರ ₹5 ನಿಗದಿಪಡಿಸಲಾಗಿದೆ. ಅಲ್ಲದೆ, ರೈಲು ಬಂದಾಗ ಮಾತ್ರ ಗ್ರಾಹಕರು ಇರುತ್ತಾರೆ. ಈ ಕಾರಣಕ್ಕೆ ಪ್ರೀ ಪೇಯ್ಡ್ ಕನಿಷ್ಠ ದರ ತುಸು ಹೆಚ್ಚಿದೆ’ ಎಂದು ಜಂಕ್ಷನ್ ನಿಲ್ದಾಣದಲ್ಲಿದ್ದ ಚಾಲಕರೊಬ್ಬರು ಸಮರ್ಥಿಸಿಕೊಂಡರು. 

ಮಂಗಳೂರಿನ ಸೆಂಟ್ರೆಲ್‌ ರೈಲು ನಿಲ್ದಾಣದ ಪ್ರೀ ಪೇಯ್ಡ್ ರಿಕ್ಷಾ ಕೌಂಟರ್ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.
ಪ್ರೀ ಪೇಯ್ಡ್ ಕೌಂಟರ್‌ಗಳ ಬಗ್ಗೆ ಕೆಲವು ದೂರುಗಳ ಬಂದ ಕಾರಣ ಅವುಗಳನ್ನು ಸಂಚಾರಿ ಪೊಲೀಸರ ಮೂಲಕ ನಿರ್ವಹಣೆ ಮಾಡುವಂತೆ ಹಿಂದೆಯೇ ಆರ್‌ಟಿಒ ಅವರಿಗೆ ಮನವಿ ಮಾಡಲಾಗಿದೆ.
ಅರುಣ್‌ಕುಮಾರ್‌ ಆಟೊ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
‘ರೈಲ್ವೆ ಇಲಾಖೆ ಉತ್ತರದ ನಿರೀಕ್ಷೆಯಲ್ಲಿ’
ಎರಡೂ ರೈಲ್ವೆ ನಿಲ್ದಾಣಗಳಲ್ಲಿ ಇರುವ ಪ್ರೀ ಪೇಯ್ಡ್ ಕೌಂಟರ್‌ಗಳು ರೈಲ್ವೆ ಇಲಾಖೆಯ ಜಾಗದಲ್ಲಿವೆ. ಸಂಚಾರಿ ಪೊಲೀಸರಿಂದ ಕೌಂಟರ್ ನಿರ್ವಹಣೆ ಟೋಕನ್ ದರ ಮತ್ತಿತರ ವಿಷಯಗಳ ಕುರಿತು ಈ ಹಿಂದೆಯೇ ಆರ್‌ಟಿಎ ಸಭೆ ನಡೆಸಿ ಚರ್ಚಿಸಲಾಗಿದೆ. ಸಂಚಾರ ಎಸಿಪಿಯವರು ಪಾಲಕ್ಕಾಡ್ ವಿಭಾಗದ ವಿವಿಧ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಪ್ರೀ ಪೇಯ್ಡ್ ಕೌಂಟರ್‌ಗಳ ಮಾಹಿತಿ ಕಲೆ ಹಾಕಿದ್ದಾರೆ. ರೈಲ್ವೆ ಇಲಾಖೆಯಿಂದ ಉತ್ತರ ಬಂದ ಮೇಲೆ ಆರ್‌ಟಿಎ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ಲಾಡ್ ಪ್ರತಿಕ್ರಿಯಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ರೀ ಪೇಯ್ಡ್ ಕೌಂಟರ್‌ ಪ್ರಾರಂಭಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.