ಮಂಗಳೂರು: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ವಿನ್ಯಾಸದಲ್ಲೇ ಅನೇಕ ಲೋಪಗಳಿದ್ದು, ಭಾರಿ ಗುಂಡಿಗಳು ನಿರ್ಮಾಣವಾಗಿವೆ. ಹೆದ್ದಾರಿಯನ್ನು ದುರಸ್ತಿ ಪಡಿಸಿ, ಸಾವು ನೋವುಗಳನ್ನು ತಪ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದರು.
15 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಇಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಜಾಂಚಿ ಶಶಿಧರ ಹೆಗ್ಡೆ, ‘ಮುಕ್ಕದಿಂದ ಜಪ್ಪಿನಮೊಗರುವಿನ ನೇತ್ರಾವತಿ ಸೇತುವೆವರೆಗೆ ಎನ್‌ಎಚ್ 66 ಪಾಲಿಕೆ ವ್ಯಾಪ್ತಿಯಲ್ಲಿದೆ. ನಗರದ ಜೀವನಾಡಿಯೂ ಆಗಿರುವ ಈ ಹೆದ್ದಾರಿಯ ಆಸುಪಾಸಿನಲ್ಲಿ ಎಂಆರ್‌ಪಿಎಲ್, ಎಂಸಿಎಫ್, ನವಮಂಗಳೂರು ಬಂದರು ಮೊದಲಾದ ಪ್ರಮುಖ ಸಂಸ್ಥೆಗಳಿವೆ. ಈ ಹೆದ್ದಾರಿಯ ಲೋಪಗಳ ಬಗ್ಗೆ ಈ ಹಿಂದೆ ಪಾಲಿಕೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಗಳು ನಡೆದಿವೆ. ಲೋಪ ಸರಿಪಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಎನ್‌ಎಚ್‌ಎಐ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅದು ಕಾರ್ಯಗತವಾಗಿಲ್ಲ. ಕೂಳೂರಿನಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮಹಿಳೆ (ಮಾಧವಿ) ಸಾವಿಗೀಡಾಗಲೂ ಹಾಗೂ ಎರಡು ತಿಂಗಳೂ ಹಿಂದೆ ಪಣಂಬೂರಿನಲ್ಲಿ ನಡೆದ ಅಪಘಾತಸಲ್ಲಿ ಅಶ್ರಫ್ ಸಾಯಲು ರಸ್ತೆ ಗುಂಡಿಗಳೇ ಕಾರಣ. ಸಂತ್ರಸ್ತ ಕುಟುಂಬಗಳಿಗೆ ಎನ್‌ಎಚ್‌ಎಐ ಪರಿಹಾರ ನೀಡಬೇಕು’ ಎಂದರು.
‘ಕೊಟ್ಟಾರ ಚೌಕಿಯಲ್ಲಿ ಉಂಟಾಗುವ ಪ್ರವಾಹ ಉಂಟಾಗುವುದಕ್ಕೆ ಹೆದ್ದಾರಿಯ ವಿನ್ಯಾಸದ ಲೋಪವೇ ಕಾರಣ. ಕೋಡಿಕಲ್ ಕ್ರಾಸ್ ರಸ್ತೆಯು ಹೆದ್ದಾರಿ ಸೇರುವಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತದೆ. ಕೊಟ್ಟಾರಚೌಕಿ ಮೇಲ್ಸೇತುವೆಯನ್ನು ಕೋಡಿಕಲ್ ಕ್ರಾಸ್‌ವರೆಗೆ ಮುಂದುವರಿಸುವ ಅಗತ್ಯವಿತ್ತು. ಕುಂಟಿಕಾನದಲ್ಲಿ ಮೇಲ್ಸೇತುವೆ ನಿರ್ಮಿಸುವ ಬದಲು ಕೆಪಿಟಿ ಜಂಕ್ಷನ್‌ನಲ್ಲಿ ಹಾಗೂ ನಂತೂರಿನಲ್ಲಿ ಮೇಲ್ಸೇತುವೆ ಅಗತ್ಯ ಜಾಸ್ತಿ ಇದೆ. ಈ ಎರಡೂ ಜಂಕ್ಷನ್‌ಗಳಲ್ಲೂ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.
ಪಾಲಿಕೆಯ ಮಾಜಿ ಸದಸ್ಯ ಅನಿಲ್ ಕುಮಾರ್, ‘ಈ ಹೆದ್ದಾರಿಯ ಗುಂಡಿ ಮುಚ್ಚಿದರೆ ಸಾಲದು. ಈ ಹೆದ್ದಾರಿಯಲ್ಲಿ ನಿತ್ಯವೂ ಭಾರಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಸಾಗುತ್ತವೆ. ಅವುಗಳ ಭಾರವನ್ನು ತಾಳಿಕೊಳ್ಳು ’ಶಕ್ತಿ ಇಲ್ಲಿನ ಡಾಂಬರು ರಸ್ತೆಗೆ ಇಲ್ಲ. ಮುಕ್ಕದಿಂದ ನಂತೂರುವರೆಗಿನ ಹೆದ್ದಾರಿಯನ್ನು ಕಾಂಕ್ರೀಟೀಕರಣಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪಾಲಿಕೆ ಮಾಜಿ ಸದಸ್ಯ ಎ.ಸಿ.ವಿನಯ್ ಕುಮಾರ್, ‘ಈಗಲೂ ಬಿ.ಸಿ.ರೋಡ್‌ನಿಂದ ಮುಕ್ಕವರೆಗೆ ನಿರ್ಮಿಸಿರುವ 32 ಕಿ.ಮೀ ಉದ್ದದ ಹೆದ್ದಾರಿಯನ್ನು ನವಮಂಗಳೂರು ಬಂದರು ರಸ್ತೆ ಕಂಪನಿ (ಎನ್‌ಎಂಪಿಆರ್‌ಸಿಎಲ್) ನಿರ್ವಹಿಸುತ್ತಿದೆ. ಇದಕ್ಕೆ ಬ್ರಹ್ಮರಕೂಟ್ಲು ಬಳಿ ನಿತ್ಯವೂ ₹ 12 ಲಕ್ಷದಿಂದ ₹ 17 ಲಕ್ಷ ಟೋಲ್ ಸಂಗ್ರಹಿಸಲಾಗುತ್ತದೆ. ಈ ಹಣ ಏನಾಗುತ್ತಿದೆ. ಟೋಲ್ ಮೂಲಕ ಸಂಗ್ರಹವಾದ ಮೊತ್ತದ ಶೇ 50ರಷ್ಟನ್ನು ರಸ್ತೆ ನಿರ್ವಹಣೆಗೆ ಬಳಸಿದ್ದರೂ ಈ ಹೆದ್ದಾರಿ ಇಷ್ಟೊಂದು ಹದಗೆಡುತ್ತಿರಲಿಲ್ಲ’ ಎಂದರು.
‘ಹೆದ್ದಾರಿಯನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಸಂಸದರ ಹಾಗೂ ಆಯಾ ಕ್ಷೇತ್ರದ ಶಾಸಕರ ಜವಾಬ್ದಾರಿ. ಅವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದರು.
‘ನಗರದ ಒಳಗಿನ ರಸ್ತೆಗಳೂ ಹದಗೆಟ್ಟಿರುವುದು ನಿಜ. ಅವುಗಳನ್ನು ದುರಸ್ತಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ‘ ಎಂದು ಶಶಿಧರ ಹೆಗ್ಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಪ್ರಮುಖರಾದ ಅಬ್ದುಲ್ ರವೂಫ್, ಭಾಸ್ಕರ್.ಕೆ. ಮೊಯಿಲಿ, ಲ್ಯಾನ್ಸಿ ಲಾಟೊ ಪಿಂಟೊ, ಪ್ರಕಾಶ್ ಸಾಲಿಯಾನ್, ಸಂಶುದ್ದೀನ್ ಬಂದರ್, ಸಂಶುದ್ದೀನ್ ಕುದ್ರೊಳಿ, ಸುಹಾನ್ ಆಳ್ವ, ಅಶ್ರಫ್ ಬಜಾಲ್, ಕೇಶವ ಮರೋಳಿ, ಅಶೋಕ್ ಡಿ.ಕೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.