
ಪುತ್ತೂರು: ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಿಂದಾಗಿ ನೆಮ್ಮದಿಯಿಂದ ಬಾಳುವಂತಾಗಿದೆ. ಬಡ ಜನರಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದರೆ ಮಾತ್ರ ಬಡವರ ಮನೆಯಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ತಾಲ್ಲೂಕಿನ ಕೊಳ್ತಿಗೆ ಗ್ರಾಮದ ಮಣಿಕ್ಕರ ವಾರ್ಡ್‌ನಲ್ಲಿ ಶಾಸಕರ ₹1.2 ಕೋಟಿ ಅನುದಾನದಲ್ಲಿ ನಡೆಸಲಾದ ಕಾಮಗಾರಿಗಳನ್ನು ಉದ್ಘಾಟಿಸಿ, ಉಳಿದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕೊಳ್ತಿಗೆ ಗ್ರಾಮದ ಮಣಿಕ್ಕರ ವಾರ್ಡನ್ನು ಕಡೆಗಣಿಸಲಾಗಿತ್ತು. ಇಲ್ಲಿ ಅಗತ್ಯವಾಗಿ ಆಗಬೇಕಿದ್ದ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ನಾನು ಅನುದಾನ ಒದಗಿಸುವ ಮೂಲಕ ಜನರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿದರು. ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಸದಸ್ಯರಾದ ಶುಭಲತಾ ಜೆ. ರೈ, ಸುಂದರ ಪಿ.ಬಿ, ಮಣಿಕ್ಕಾರ ಬೂತ್ ಅಧ್ಯಕ್ಷ ಜಗನ್ನಾಥ ರೈ, ಶ್ಯಾಮ್‌ಸುಂದರ್ ರೈ ಕೊಳ್ತಿಗೆ, ವಲಯ ಕಾಂಗ್ರೆಸ್ ಅಧ್ಯಕ್ಷ ಪವನ್, ಪಕ್ಷದ ಪ್ರಮುಖರಾದ ವಸಂತ ಕುಮಾರ್ ರೈ ದುಗ್ಗಳ, ಗಫೂರ್ ಸಾಹೇಬ್, ಎ.ಕೆ. ಜಯರಾಮ ರೈ ಕೆಯ್ಯೂರು, ಇಸಾಕ್ ಸಾಹೇಬ್, ಅಬ್ದುಲ್ ಖಾದರ್ ಮೇರ್ಲ, ವೆಂಕಪ್ಪ ಗೌಡ ನಾರ್ಕೋಡು, ನವೀನ್ ರೈ, ಸಂತೋಷ್ ಕುಮಾರ್ ನಳೀಲು ಭಾಗವಹಿಸಿದ್ದರು.
ಬಿಡುಗಡೆಯಾದ ಅನುದಾನ: ನಳೀಲು ದೇವಸ್ಥಾನ ಸಂಪರ್ಕ ರಸ್ತೆ ಕಾಂಕ್ರಿಟೀಕರಣ– ₹20 ಲಕ್ಷ, ಪಾಲ್ತಾಡು ಸ್ವಾಮಿ ಕೊರಗಜ್ಜ ದೈವಸ್ಥಾನ– ₹5 ಲಕ್ಷ, ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನದ ಸಂಪರ್ಕ ರಸ್ತೆಯಲ್ಲಿ ಸೇತುವೆ ನಿರ್ಮಾಣ ₹40 ಲಕ್ಷ, ಮಣಿಕ್ಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ವಿಸ್ತರಣೆ– ₹5 ಲಕ್ಷ, ಅಕ್ಷರ ದಾಸೋಹ ಕಟ್ಟಡ– ₹5 ಲಕ್ಷ, ಚಾವಣಿ ನಿರ್ಮಾಣ ₹2 ಲಕ್ಷ, ಪಾಲ್ತಾಡು ಬಾಕಿಜಾಲು ನಿವೇಶನ ಜಾಗದ ಸಮತಟ್ಟು– ₹5 ಲಕ್ಷ, ಪೆಲತ್ತಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ– ₹10 ಲಕ್ಷ, ತಾರಿಪಡ್ಪು ಕಾಪಿನಕಾಡು ಸಂಪರ್ಕ ರಸ್ತೆ ಅಭಿವೃದ್ಧಿ– ₹5 ಲಕ್ಷ, ವಿಷ್ಣುನಗರ ಅಲ್ಪಸಂಖ್ಯಾತರ ಕಾಲೊನಿ ರಸ್ತೆ ಅಭಿವೃದ್ಧಿ– ₹5 ಲಕ್ಷ ಅನುದಾನ ಶಾಸಕರು ಒದಗಿಸಿದ್ದಾರೆ.