ADVERTISEMENT

ಕೇರಳ ಸಿಎಂ ವ್ಯಂಗ್ಯದ ಮಾತಿಗೆ ಕಾಂಗ್ರೆಸ್ ಸಂಸದ ಕಿಡಿ

ಕಾಂಞಂಗಾಡ್‌–ಕಾಣಿಯೂರು ಹೊಸ ರೈಲು ಮಾರ್ಗ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 6:33 IST
Last Updated 17 ಜುಲೈ 2024, 6:33 IST

ತಿರುವನಂತಪುರ: ಕಾಸರಗೋಡು– ಕಾಣಿಯೂರು ನಡುವೆ ಹೊಸ ಮಾರ್ಗ ನಿರ್ಮಾಣದ ಪ್ರಸ್ತಾವವೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಕಾಸರಗೋಡು ಕ್ಷೇತ್ರದ ಸಂಸದ (ಕಾಂಗ್ರೆಸ್‌) ರಾಜಮೋಹನ್ ಉನ್ನಿತ್ತಾನ್‌  ಸೋಮವಾರ ನಡೆದ ಸಂಸದರ ಸಭೆಯಲ್ಲಿ ಕಿತ್ತಾಡಿದ್ದಾರೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಉನ್ನಿತ್ತಾನ್‌, ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್‌) ಘಟಕವನ್ನು ಕಾಸರಗೋಡಿನಲ್ಲಿ ಸ್ಥಾಪಿಸುವ ಕುರಿತು ಹಾಗೂ ಬಹಳ ಸಮಯದಿಂದ ನನೆಗುದಿಗೆ ಬಿದ್ದಿರುವ, ಕಾಸರಗೋಡು ಜಿಲ್ಲೆಯ ಕಾಂಞಂಗಾಡ್‌– ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರು ನಡುವೆ ಹೊಸ ರೈಲ್ವೆ ಮಾರ್ಗವನ್ನು ನಿರ್ಮಿಸುವ ಪ್ರಸ್ತಾವಗಳ ಬಗ್ಗೆ ಮುಖ್ಯಮಂತ್ರಿ ಅಸಡ್ಡೆ ತೋರಿದ್ದಲ್ಲದೇ, ವ್ಯಂಗ್ಯವಾಗಿ ಮಾತನಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಂಸತ್ತಿನಲ್ಲಿ ಹಾಗೂ ಕೇಂದ್ರ ಸರ್ಕಾರದ ಬಳಿ ಚರ್ಚಿಸಬೇಕಾದ ಕೇರಳ ರಾಜ್ಯದ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಸಂಸದರ ಸಭೆ ಕರೆದಿದ್ದರು. 

ADVERTISEMENT

‘ಎಐಐಎಂಎಸ್‌ ಸ್ಥಾಪನೆಗೆ ಕೇರಳದಲ್ಲಿ ಕಾಸರಗೋಡು ಸೂಕ್ತವಾಸ ಸ್ಥಳ ಎಂದು ನಾನು ಪ್ರಸ್ತಾಪಿಸಿದೆ. ಈ ಪ್ರದೇಶ ವೈದ್ಯಕೀಯ ಸವಲತ್ತಿನಲ್ಲಿ ಹಿಂದುಳಿರುವುದನ್ನು ಉಲ್ಲೇಖಿಸಿದ್ದೆ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ತೋರಿದ ವಿಜಯನ್‌, ಎಐಐಎಂಎಸ್‌ ಸ್ಥಾಪನೆಗೆ  ಕೊಯಿಕ್ಕೋಡ್‌ ಹೆಸರನ್ನು ಪ್ರಸ್ತಾಪಿಸಿದರು. ಅಲ್ಲಿ ಈಗಾಗಲೇ ಸುಸಜ್ಜಿತ ವೈದ್ಯಕೀಯ ಕಾಲೇಜು ಹಾಗೂ ಅನೇಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿವೆ ಎಂಬ ಸಂಗತಿ ತಿಳಿದೂ ಅವರು ಈ ರೀತಿ ಮಾಡಿದರು. ಈ ವಿಚಾರವನ್ನು ಚರ್ಚೆಗೆ ಎತ್ತಿಕೊಂಡಾಗ ‘ಕೊಯಿಕ್ಕೋಡ್‌ನಲ್ಲಿ ಎಐಐಎಂಎಸ್‌ ಸ್ಥಾಪನೆಗೆ ಉನ್ನಿತ್ತಾನ್‌ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಗಿ ಹೇಳಿದರು’ ಎಂದರು.  

‘ಕಾಂಞಂಗಾಡ್‌– ಕಾಣಿಯೂರು ಹೊಸ ರೈಲು ಮಾರ್ಗವು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲುದು. ನನೆಗುದಿಗೆ ಬಿದ್ದಿರುವ ಈ ಪ್ರಸ್ತಾವದ ಕುರಿತು ವಿಜಯನ್‌ ಅವರ ವ್ಯಂಗ್ಯದ ಹೇಳಿಕೆ ಮತ್ತಷ್ಟು ಬೇಸರವನ್ನುಂಟುಮಾಡಿದೆ. ಈ ಯೋಜನೆಯ ವೆಚ್ಚವನ್ನು ಕರ್ನಾಟಕ, ಕೇರಳ ರಾಜ್ಯಗಳು ಮತ್ತು ಇಲಾಖೆ ಹಂಚಿಕೊಳ್ಳಬೇಕು ಎಂಬ ರೈಲ್ವೆ ಇಲಾಖೆಯ ಈ ಪ್ರಸ್ತಾವಕ್ಕೆ ನಿರಾಕ್ಷೇಪಣ ಪತ್ರ ನೀಡುವಂತೆ ನಾನು ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜಯನ್‌, ‘ಕರ್ನಾಟಕದಲ್ಲಿ ಈ ಹಿಂದೆ ಇದ್ದ ಬಿಜೆಪಿ ನೇತೃತ್ವದ ಸರ್ಕಾರದ ಜೊತೆ ಈ ವಿಚಾರ ಪ್ರಸ್ತಾಪಿಸಿದ್ದು, ನಿರಾಕ್ಷೇಪಣಾ ಪತ್ರ  ನೀಡಲು ಸಾಧ್ಯವಿಲ್ಲ ಎಂದಿದ್ದಾಗಿ ತಿಳಿಸಿದರು’’ ಎಂದು ಉನ್ನಿತ್ತಾನ್ ತಿಳಿಸಿದರು. 

‘ಕೇರಳ ಸರ್ಕಾರವು ಈ ಪ್ರಸ್ತಾವಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ್ದೇ ಆದರೆ, ಕರ್ನಾಟಕದ ಈಗಿನ ಸರ್ಕಾರದ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದು ನಾನು ಹೇಳಿದೆ. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿಜಯನ್‌, ‘ಉನ್ನಿತ್ತಾನ್‌ ಅವರಿಗೆ ನಿರಕ್ಷೇಪಣಾ ಪತ್ರವನ್ನು ಹಸ್ತಾಂತರಿಸಲಾಗುವುದು’ ಎಂದರು. ಸಂಸದರೊಬ್ಬರ ಸಲಹೆ ಬಗ್ಗೆ ಈ ರೀತಿ ವ್ಯಂಗ್ಯವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ನಾನು ಮುಖ್ಯಮಂತ್ರಿಗೆ ತಿಳಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.