ಮಂಗಳೂರು: ‘ರಾಜ್ಯಪಾಲರನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ, ಬಾಂಗ್ಲಾ ದೇಶದ ಅಧ್ಯಕ್ಷರು ರಾತ್ರೋ ರಾತ್ರಿ ಓಡಿಹೋದಂತಹ ಪರಿಸ್ಥಿತಿ ರಾಜ್ಯಪಾಲರಿಗೂ ಬರುತ್ತದೆ. ನಮ್ಮ ಮುಂದಿನ ಹೋರಾಟ ರಾಜಭವನ ಚಲೋ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿಗೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್‌ನಿಂದ ಇಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಬಾಂಗ್ಲಾ ದೇಶದಲ್ಲಿ ನಡೆದ ಘಟನೆಯ ರೀತಿಯಲ್ಲೇ ರಾಜ್ಯಪಾಲರ ಕಚೇರಿಗೆ ಹಾಗೂ ಅವರ ಮನೆಗೆ ನುಗ್ಗುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರಾದ ನಾವು ಮಾಡಿಯೇ ತೀರುತ್ತೇವೆ’ ಎಂದರು.
ಬ್ರಹ್ಮಶ್ರಿ ನಾರಾಯಣ ಗುರು ವೃತ್ತದಿಂದ ಲಾಲ್ ಬಾಗ್ ವರೆಗೆ ಪ್ರತಿಭಟನಾ ಜಾಥಾ ನಡೆನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಟೈರ್ ಸುಟ್ಟು ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಖಾಸಗಿ ಸಿಟಿಬಸ್‌ಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದು, ಬಸ್ ಒಳಗಿದ್ದ ಮಹಿಳಾ ಪ್ರಯಾಣಿಕರೊಬ್ಬರು ಗಾಯಗೊಂಡರು.
ಮೂವರ ಬಂಧನ: ‘ ಕಲ್ಲು ತೂರಾಟ ಸಂಬಂಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಶಾಹುಲ್ ಹಮೀದ್, ಅನ್ವರ್ ಹಾಗೂ ಕಿಶೋರ್ ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ಐವನ್ ವಿರುದ್ಧ ಕ್ರಮಕ್ಕೆ ಬಿಜೆಪಿ ಮನವಿ: ‘ರಾಜ್ಯಪಾಲರ ವಿರುದ್ಧ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಗಲಭೆ ನಡೆಸುವಂತೆ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಮನೆಗೆ ನುಗ್ಗುತ್ತೇವೆ ಎಂದು ಹೇಳಿಕೆ ನೀಡಿರುವ ಐವನ್ ಡಿಸೋಜ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿಯ ಸಂಸದ, ಶಾಸಕರು ಹಾಗೂ ಮುಖಂಡರ ನಿಯೋಗ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದೆ.
ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬರ್ಕೆ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.