ADVERTISEMENT

ಆರತಕ್ಷತೆ ವೇದಿಕೆಯಲ್ಲಿ ಉಡುಗೊರೆ ಪಡೆಯಬೇಕಾದ ವರ ನೀಡಿದ್ದು ಕೊಡುಗೆ!

ಅಸಹಾಯಕ ವ್ಯಕ್ತಿಗೆ ₹25 ಸಾವಿರ ನೀಡಿದ ಪೊಲೀಸ್‌ ಕಾನ್‌ಸ್ಟೆಬಲ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 10:19 IST
Last Updated 4 ನವೆಂಬರ್ 2019, 10:19 IST
ಮದುವೆ ಮಂಟಪದಲ್ಲೇ ಅಸಹಾಯಕ ವ್ಯಕ್ತಿ ಲಿಂಗು ಎಂಬವರಿಗೆ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಿದ ಪುತ್ತೂರು ಸಂಚಾರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ರೋಹಿತ್‌ ಕುಮಾರ್
ಮದುವೆ ಮಂಟಪದಲ್ಲೇ ಅಸಹಾಯಕ ವ್ಯಕ್ತಿ ಲಿಂಗು ಎಂಬವರಿಗೆ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಿದ ಪುತ್ತೂರು ಸಂಚಾರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ರೋಹಿತ್‌ ಕುಮಾರ್   

ಪುತ್ತೂರು: ತನ್ನ ಮದುವೆ ಮಂಟಪದಲ್ಲಿ ಉಡುಗೊರೆ ಸ್ವೀಕರಿಸುವ ಬದಲಾಗಿ, ಅಸಹಾಯಕರೊಬ್ಬರಿಗೆ ಮನೆ ನಿರ್ಮಿಸಲು ₹25 ಸಾವಿರ ಹಾಗೂ ಸಾಮಗ್ರಿ ನೀಡುವ ಮೂಲಕ ನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ರೋಹಿತ್ ಕುಲಾಲ್ ಆದರ್ಶ ಮೆರೆದಿದ್ದಾರೆ.

ಕಡಬ ತಾಲ್ಲೂಕಿನ ರಾಮಕುಂಜ ಗ್ರಾಮದ ಬೊಳ್ಳೆರೋಡಿ ಚೆನ್ನಪ್ಪ ಕುಲಾಲ್ ಮತ್ತು ಹೇಮಾವತಿ ದಂಪತಿ ಪುತ್ರ ರೋಹಿತ್ ಕುಲಾಲ್ ವಿವಾಹವು ಅಮಿತಾ ಜೊತೆಗೆ ಭಾನುವಾರ ಉಪ್ಪಿನಂಗಡಿಯ ಶಕ್ತಿ ಸಭಾಭವನದಲ್ಲಿ ನಡೆಯಿತು. ಈ ಮದುವೆ ಮಂಟಪದಲ್ಲಿ ಬಳ್ಪ ಸಮೀಪದ ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬವರಿಗೆ ನೆರವು ನೀಡಲಾಗಿದೆ.

ಲಿಂಗು ಅವರಿಗೆ ದೃಷ್ಟಿ ಹಾಗೂ ಶ್ರವಣ ದೋಷವಿದೆ. ಅಲ್ಲದೇ, ಬಂಧುಗಳು ದೂರವಾಗಿದ್ದು, ಒಬ್ಬಂಟಿಯಾಗಿದ್ದಾರೆ. ಮನೆ ಇಲ್ಲದ ಕಾರಣ, ಟಾರ್ಪಾಲ್‌ ಹಾಕಿದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ADVERTISEMENT

ಲಿಂಗು ಅವರ ಅತಂತ್ರ ಬದುಕಿನ ವಿಚಾರವನ್ನು ರೋಹಿತ್‌ ಅವರಿಗೆ ಯುವ ಬ್ರಿಗೇಡ್‌ನ ತಿಲಕ್ ತಿಳಿಸಿದ್ದರು. ಅಲ್ಲದೇ, ಲಿಂಗು ಅವರ ಜಾಗದ ದಾಖಲೆಗಳನ್ನು ಸರಿಪಡಿಸಿ, ಡಿಸೆಂಬರ್‌ನಲ್ಲಿ ಅವರಿಗೆ ಮನೆ ನಿರ್ಮಿಸಿ ಕೊಡಲು ಯುವಬ್ರಿಗೇಡ್ ಮುಂದಾಗಿದೆ.

‘ನನಗೆ ಆಡಂಬರದ ವಿವಾಹ ಇಷ್ಟವಿರಲಿಲ್ಲ. ಮದುವೆಯ ಸವಿನೆನಪಿಗಾಗಿ, ಯಾರಿಗಾದರೂ ಸಹಾಯ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ’ ಎಂದು ರೋಹಿತ್ ಕುಲಾಲ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.