ADVERTISEMENT

ದ.ಕ. ಹಾಲು ಒಕ್ಕೂಟ: ಅಧ್ಯಕ್ಷರಾಗಿ ರವಿರಾಜ ಹೆಗ್ದೆ, ಉಪಾಧ್ಯಕ್ಷರಾಗಿ ಕೋಟ್ಯಾನ್

​ಪ್ರಜಾವಾಣಿ ವಾರ್ತೆ
Published 6 ಮೇ 2025, 9:01 IST
Last Updated 6 ಮೇ 2025, 9:01 IST
<div class="paragraphs"><p>ರವಿರಾಜ ಹೆಗ್ಡೆ,&nbsp;ಉದಯ್ ಎಸ್.ಕೋಟ್ಯಾನ್</p></div>

ರವಿರಾಜ ಹೆಗ್ಡೆ, ಉದಯ್ ಎಸ್.ಕೋಟ್ಯಾನ್

   

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ರವಿರಾಜ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಉದಯ್‌ ಎಸ್ ಕೋಟ್ಯಾನ್ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.

ಈ ಹಿಂದೆಯೂ ಎರಡು ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿದ್ದ ರವಿರಾಜ ಹೆಗ್ಡೆ ಅವರು ಒಟ್ಟು ಹನ್ನೆರಡುವರೆ ವರ್ಷ ಈ ಹುದ್ದೆಯನ್ನು ನಿಭಾಯಿಸಿದ್ದರು. ಅವರು ಮೂರನೇ ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.

ADVERTISEMENT

ಒಕ್ಕೂಟದ ನಿರ್ದೇಶಕರ ಮಂಡಳಿಗೆ ಈ ಹಿಂದೆ ನಡೆದಿದ್ದ ಚುನಾವಣೆಗಳಲ್ಲಿ ರವಿರಾಜ ಹೆಗ್ಡೆ ಸಹಕಾರ ಭಾರತಿಯಿಂದ ಆಯ್ಕೆಯಾಗಿದ್ದರು. ಈ ಸಲ ನಿರ್ದೇಶಕರ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯು ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ‘ಹೈನುಗಾರರ ಬಳಗ’ವನ್ನು ಕಟ್ಟಿಕೊಂಡು ಸ್ಪರ್ಧೆ ಮಾಡಿದ್ದರು. ಒಕ್ಕೂಟದಲ್ಲಿ ಕುಂದಾಪುರ ಉಪವಿಭಾಗದ ಎಲ್ಲ ಎಂಟೂ ಸ್ಥಾನಗಳಲ್ಲಿ ಹೆಗ್ಡೆ ನೇತೃತ್ವದ ಹೈನುಗಾರರ ಬಳಗದವರೇ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಪುತ್ತೂರು ಉಪ ವಿಭಾಗಕ್ಕೆ ಸಂಬಂಧಿಸಿದ ಎಂಟು ಸ್ಥಾನಗಳಲ್ಲಿ ಹೈನುಗಾರರ ಬಳಗದಿಂದ ಸ್ಪರ್ಧಿಸಿದ್ದ ಒಕ್ಕೂಟದ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಹಾಗೂ ನಂದಾರಾಮ್ ರೈ ಗೆದ್ದಿದ್ದರು. ಈ ಮೂಲಕ ಒಕ್ಕೂಟದ ಒಟ್ಟು 16 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಬೆಂಬಲಿತ ‘ಹೈನುಗಾರರ ಬಳಗ’ ಮೇಲುಗೈ ಸಾಧಿಸಿತ್ತು.

ಬಹುಮತ ಇಲ್ಲದ ಕಾರಣ ಸಹಕಾರ ಭಾರತಿ ಬಳಗವು ಒಕ್ಕೂಟದ ಅಧ್ಯಕ್ಷ ಮತ್ತು ಉ‍ಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಎರಡು ದಶಕಗಳಿಂದ ವರ್ಷಗಳಿಂದ ಸಹಕಾರ ಭಾರತಿ ತೆಕ್ಕೆಯಲ್ಲಿದ್ದ ಒಕ್ಕೂಟದ ಅಧಿಕಾರ ಈ ಸಲ ಕೈ ತಪ್ಪಿದೆ.

ಈ ಹಿಂದೆ ಸಹಕಾರ ಭಾರತಿಯಲ್ಲಿ ಗುರುತಿಸಿಕೊಂಡಿದ್ದ ಉದಯ್ ಎಸ್. ಕೋಟ್ಯಾನ್ ಅವರಿಗೂ ಸಂಸ್ಥೆಯು ಟಿಕೆಟ್ ನಿರಾಕರಿಸಿತ್ತು. ಹಾಗಾಗಿ ಅವರೂ ಹೈನುಗಾರರ ಬಳಗದಿಂದ ಕಣಕ್ಕಿಳಿದು ಗೆದ್ದಿದ್ದರು. ಒಕ್ಕೂಟದ ಚುನಾವಣೆಯಲ್ಲಿ ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಸ್ಪರ್ಧಿಸಿದ್ದರಿಂದ ಉದಯ ಕೋಟ್ಯಾನ್‌

ಅವರನ್ನು ಬಿಜೆಪಿಯ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಿ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿತ್ತು.

ಕೆಎಎಸ್‌ ಅಧಿಕಾರಿ ರಾಜು ಕೆ ಅವರು ಚುನಾವಣೆ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.