ADVERTISEMENT

ಕಾಮಗಾರಿ ಜನರಿಗೆ ಕಿರಿಕಿರಿ ಉಂಟು ಮಾಡದಿರಲಿ: ಸಚಿವ ಸುನಿಲ್ ಕುಮಾರ್‌ ಸೂಚನೆ

ಇಲಾಖೆಗಳ ನಡುವೆ ಸಮನ್ವಯ ಕಾಪಾಡಿ: ಅಧಿಕಾರಿಗಳಿಗೆ ಸಚಿವ ಸುನಿಲ್ ಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 11:29 IST
Last Updated 13 ಜೂನ್ 2022, 11:29 IST
ವಿ.ಸುನಿಲ್‌ ಕುಮಾರ್‌
ವಿ.ಸುನಿಲ್‌ ಕುಮಾರ್‌   

ಮಂಗಳೂರು: ‘ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ವೇಳೆ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಕಾಮಗಾರಿಯಿಂದ ಜನರಿಗೆ ಯಾವುದೇ ಕಿರಿಕಿರಿ ಉಂಟಾಗಬಾರದು. ಪರಸ್ಪರ ಚರ್ಚಿಸಿ ಸಮನ್ವಯದಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.

ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ, ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಅನುದಾನದಿಂದ ನಗರದಲ್ಲಿ ಕೈಗೊಳ್ಳುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಜಲಸಿರಿ ಕುಡಿಯುವ ನೀರು ಪೂರೈಕೆ ಯೋಜನೆಯ ಕೊಳವೆ ಅಳವಡಿಕೆಗೆ ರಸ್ತೆ ಅಗೆದು ಮುಚ್ಚಿದ ಬಳಿಕ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾದವರು (ಗೇಲ್‌) ಕೊಳವೆ ಅಳವಡಿಕೆಗೆ ಮತ್ತೊಮ್ಮೆ ರಸ್ತೆ ಅಗೆಯುತ್ತಾರೆ. ಬಳಿಕ ನೆಲದಡಿ ಕೇಬಲ್‌ ಅಳವಡಿಸಲು ರಸ್ತೆ ಅಗೆಯಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಕಾಮಗಾರಿಯ ವೇಗವೂ ಕುಂಠಿತವಾಗುತ್ತಿದೆ. ಈ ಸಮಸ್ಯೆ ತಪ್ಪಿಸಲು ಈ ಎಲ್ಲ ಇಲಾಖೆಗಳ ರಾಜ್ಯ ಮಟ್ಟದ ಅಧಿಕಾರಿಗಳನ್ನು ಇದೇ 23 ಅಥವಾ 24ರಂದು ನಗರಕ್ಕೆ ಕರೆಸಿ ಸಭೆ ನಡೆಸಲಾಗುವುದು. ಎಲ್ಲಿ ಹೊಂದಾಣಿಕೆಯ ಅಗತ್ಯ ಇದೆ ಎಂಬುದನ್ನು ಮನಗಾಣುವ ಉದ್ದೇಶದಿಂದ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಲಿದ್ದೇನೆ’ ಎಂದರು.

ADVERTISEMENT

‘ಕೇಂದ್ರದ 15ನೇ ಹಣಕಾಸು ನಿಧಿ ಹಾಗೂ ಮಹಾತ್ಮ ಗಾಂಧಿ ವಿಕಾಸ ಯೋಜನೆಗಳ ಮೂಲಕವೂ ನಗರದ ಅಭಿವೃದ್ಧಿಗೆ ಅನುದಾನ ಬಂದಿದೆ. ಈ ಕಾಮಗಾರಿಗಳನ್ನು ಯೋಜನಾಬದ್ಧವಾಗಿ ಆರಂಭಿಸದಿದ್ದರೆ ಮತ್ತಷ್ಟು ಗೋಜಲು ಉಂಟಾಗಲಿದೆ. ಇದನ್ನು ತಪ್ಪಿಸಲು ನಿರ್ದಿಷ್ಟ ಬ್ಲಾಕ್‌ಗಳನ್ನು ಗುರುತಿಸಿಕೊಂಡು, ಒಂದೊಂದೇ ಬ್ಲಾಕ್‌ಗಳಲ್ಲಿ ಕೆಲಸ ಸಂಪೂರ್ಣಗೊಳಿಸಿ ಮುಂದುವರಿಯುವಂತೆ ಸಲಹೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿ ಯಾವೆಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗಿದೆ. ತಡೆಗೋಡೆ, ರಸ್ತೆ, ಚರಂಡಿ ನಿರ್ಮಾಣಕ್ಕೆ ಈ ಯೋಜನೆ ಅಡಿ ಆದ್ಯತೆ ನೀಡಲಾಗುತ್ತದೆ’ ಎಂದರು.

‘ಜಿಲ್ಲೆಗೆ ಮುಂಗಾರು ಪ್ರವೇಶ ಆಗಿದೆ. ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಆಗುವುದನ್ನು ತಪ್ಪಿಸಬೇಕು. ಮಳೆನೀರು ರಸ್ತೆಯಲ್ಲೇ ಹರಿಯದೇ, ಚರಂಡಿಗಳಲ್ಲೇ ಸರಾವಾಗಿ ಹರಿಯುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಮೇಯರ್‌ ಪ್ರೇಮಾನಂದ ಶೆಟ್ಟಿ, ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರ್ ಉಪಸ್ಥಿತರಿದ್ದರು.

‘ಮಾರುಕಟ್ಟೆಗಳ ಲೋಕಾರ್ಪಣೆ ಡಿಸೆಂಬರ್‌ನಲ್ಲಿ’

‘ಕಂಕನಾಡಿ, ಕದ್ರಿ ಹಾಗೂ ಸುರತ್ಕಲ್‌ ಮಾರುಕಟ್ಟೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಕದ್ರಿ ಮತ್ತು ಕಂಕನಾಡಿ ಮಾರುಕಟ್ಟೆಗಳ ಮೊದಲ ಹಂತಗಳು ಮುಂಬರುವ ಡಿಸೆಂಬರ್‌ ಒಳಗೆ ಲೋಕಾರ್ಪಣೆಗೊಳ್ಳಲಿವೆ. ಸುರತ್ಕಲ್‌ ಮಾರುಕಟ್ಟೆಯ ಟೆಂಡರ್‌ ಪ್ರಕ್ರಿಯೆಗಳು ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ’ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

‘ಉರ್ವ ಮಾರುಕಟ್ಟೆಯನ್ನು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಾಲಿಕೆಯೇ ಇದನ್ನು ನಿರ್ವಹಣೆ ಮಾಡಲಿದೆ’ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾಹಿತಿ ನೀಡಿದರು.

ಸುರತ್ಕಲ್‌: ವಿದ್ಯುತ್‌ ಚಿತಾಗಾರ ನವೆಂಬರ್‌ಗೆ ಸಿದ್ಧ

‘ಸುರತ್ಕಲ್‌ನಲ್ಲಿ ವಿದ್ಯುತ್‌ ಚಿತಾಗಾರದ ಕಾಮಗಾರಿ ನವೆಂಬರ್‌ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಶಾಸಕ ಭರತ್‌ ಶೆಟ್ಟಿ, ‘ಈಗ ಇರುವ ಸ್ಮಶಾನದ ಜಾಗದಲ್ಲೇ ಹೊಸ ವಿದ್ಯುತ್‌ ಚಿತಾಗಾರವನ್ನು ನಿರ್ಮಿಸಲಾಗುತ್ತದೆ. ಇಲ್ಲಿ ನಾಲ್ಕು ಸಿಲಿಕಾನ್‌ ಚೇಂಬರ್‌ಗಳು ಈಗಾಗಲೇ ಇವೆ’ ಎಂದು ಮಾಹಿತಿ ನೀಡಿದರು.

ಮುಖ್ಯಾಂಶಗಳು...

ಇಡ್ಯಾ: 600 ಮನೆಗಳ ನಿರ್ಮಾಣ ಚುರುಕುಗೊಳಿಸಲು ಸೂಚನೆ

ಕಂದಾಯ ವಸೂಲಿ: ಸಿಬ್ಬಂದಿ ಕೊರತೆ ನೀಗಿಸಲು ಹೊಸ ನೇಮಕಾತಿ

ಮಹಾತ್ಮ ಗಾಂಧಿ ವಿಕಾಸ ಯೋಜನೆ 19 ಪ್ಯಾಕೇಜ್‌ಗಳಲ್ಲಿ ಅನುಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.