ADVERTISEMENT

ಕಾಪರ್‌ ಸಲ್ಫೇಟ್‌ ಸಹಾಯಧನಕ್ಕೆ ಬೇಡಿಕೆ ₹ 1 ಕೋಟಿ, ದೊರೆತಿದ್ದು ₹ 9.5 ಲಕ್ಷ !

ಅಡಿಕೆ ತೋಟಗಳಲ್ಲಿ ಕೊಳೆರೋಗ ನಿಯಂತ್ರಣಕ್ಕೆ ಸಿಂಪಡಿಸುವ ಕಾಪರ್‌ ಸಲ್ಫೇಟ್‌ ಸಹಾಯಧನ

ಸಂಧ್ಯಾ ಹೆಗಡೆ
Published 19 ಆಗಸ್ಟ್ 2022, 19:30 IST
Last Updated 19 ಆಗಸ್ಟ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣಕ್ಕೆ ಸರ್ಕಾರ ನೀಡುವ ಸಹಾಯಧನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಅಡಿಕೆ ಪ್ರಧಾನ ಬೆಳೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗ ನಿಯಂತ್ರಣಕ್ಕೆ ಅಂದಾಜು ₹ 1 ಕೋಟಿ ಮೊತ್ತದ ಕಾಪರ್‌ ಸಲ್ಫೇಟ್‌ಗೆ (ಮೈಲುತುತ್ತ) ಬೇಡಿಕೆ ಇದ್ದರೆ, ಈವರೆಗೆ ಸಹಾಯಧನ ದೊರೆತಿದ್ದು ₹ 9.5 ಲಕ್ಷ ಮಾತ್ರ!

ಮಳೆಗಾಲದಲ್ಲಿ ಅಡಿಕೆಗೆ ಕಾಡುವ ಕೊಳೆ ರೋಗ ನಿಯಂತ್ರಿಸಲು ಮೈಲುತುತ್ತ ಮತ್ತು ಸುಣ್ಣ ಮಿಶ್ರಿತ ಬೋರ್ಡೊ ದ್ರಾವಣ ಪರಿಣಾಮಕಾರಿ. ಹೀಗಾಗಿ, ರೈತರು ಮುಂಗಾರು ಪೂರ್ವದಲ್ಲಿ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡುತ್ತಾರೆ. ನಿರಂತರ ಮಳೆಯಿಂದ ರೋಗ ಉಲ್ಬಣಿಸಿದರೆ ಮತ್ತೊಮ್ಮೆ, ಕೆಲವೊಮ್ಮೆ ಎರಡು ಬಾರಿ ಸಿಂಪಡಣೆ ಮಾಡುತ್ತಾರೆ.

ಬೋರ್ಡೊ ಸಿಂಪಡಣೆಗೆ ಅನುಕೂಲವಾಗುವಂತೆ ರಾಜ್ಯ ಘಟಕ ಯೋಜನೆಯಡಿ ಶೇ 25 ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ (ಎನ್‌ಎಚ್ಎಂ) ಅಡಿಯಲ್ಲಿ ಶೇ 30ರಷ್ಟು ಸಹಾಯಧನವನ್ನು ತೋಟಗಾರಿಕಾ ಇಲಾಖೆ ಮೂಲಕ ಸರ್ಕಾರ ರೈತರಿಗೆ ನೀಡುತ್ತದೆ. ಜಿಲ್ಲೆಯಲ್ಲಿರುವ ಅಡಿಕೆ ತೋಟಗಳಿಗೆ, ಬೋರ್ಡೊ ದ್ರಾವಣ ಸಿಂಪಡಣೆಗೆ ಬೇಕಾಗುವ ಕಾಪರ್‌ ಸಲ್ಫೇಟ್‌ ಮತ್ತು ಸುಣ್ಣ ಖರೀದಿಗೆ ರೈತರಿಗೆ ಸಹಾಯಧನ ನೀಡಲು ಅಂದಾಜು ₹ 1 ಕೋಟಿ ಅಗತ್ಯವಿದೆ. ಆದರೆ, ಈ ವರ್ಷ ಜಿಲ್ಲೆಗೆ ರಾಜ್ಯ ಯೋಜನೆಯಲ್ಲಿ ₹ 16 ಲಕ್ಷ ಮತ್ತು ಎನ್‌ಎಚ್‌ಎಂ ಅಡಿಯಲ್ಲಿ ₹ 4.80 ಲಕ್ಷ ಅನುದಾನ ಮಾತ್ರ ಮಂಜೂರು ಆಗಿದೆ. ಇದರಲ್ಲಿ ಈವರೆಗೆ ಬಂದಿರುವ ಅನುದಾನ ₹ 9.5 ಲಕ್ಷ ಮಾತ್ರ. 2021–22ನೇ ಸಾಲಿನಲ್ಲಿ ರಾಜ್ಯ ಯೋಜನೆಯಲ್ಲಿ ₹ 11.50 ಲಕ್ಷ ಹಾಗೂ ಎನ್‌ಎಚ್ಎಂನಲ್ಲಿ ₹ 8.24 ಲಕ್ಷ ಅನುದಾನ ದೊರೆತಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್‌.ಆರ್.ನಾಯ್ಕ್ ಅವರ ಗಮನ ಸೆಳೆದಾಗ, ‘ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಲಭ್ಯವಾಗುವ ಅನುದಾನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹಂಚಿಕೆಯಾಗುತ್ತದೆ. ಅನುದಾನ ಲಭ್ಯತೆ ಆಧರಿಸಿ, ಈ ನೆರವು ದೊರೆಯುತ್ತದೆ. ಬಾಕಿ ಮೊತ್ತ ಶೀಘ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ’ ಎಂದರು.

‘ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಕೊಳೆರೋಗದ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೊ ಸಿಂಪಡಣೆ ಅನಿವಾರ್ಯ. ಬೋರ್ಡೊ ದ್ರಾವಣಕ್ಕೆ ಅಗತ್ಯವಾದ ಕಾಪರ್ ಸಲ್ಫೇಟ್‌ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ನೀಡುವ ಸಹಾಯಧನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೆ, ಸರಿಯಾದ ಸಮಯಕ್ಕೆ ಸಹಾಯಧನ ಸಿಗದ ಕಾರಣ, ಸಣ್ಣ ರೈತರಿಗೆ ಬೋರ್ಡೊ ಸಿಂಪಡಣೆ ಹೊರೆಯಾಗಿದೆ. ಕಾಪರ್ ಸಲ್ಫೇಟ್‌ ದರ ಕೆ.ಜಿ.ಗೆ 310, ಸುಣ್ಣ ಕೆ.ಜಿ.ಗೆ ₹ 35–40ರಷ್ಟಿದೆ. ಒಂದು ಎಕರೆ ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ, ನಿರ್ವಹಣೆ, ಕೃಷಿ ಕಾರ್ಮಿಕರ ಕೂಲಿ ಸೇರಿ ಅಂದಾಜು ₹ 9,000 ವೆಚ್ಚವಾಗುತ್ತದೆ’ ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.