ADVERTISEMENT

ಅನೈತಿಕ ಚಟುವಟಿಕೆ: ಉಜಿರೆಯಲ್ಲಿ ಲಾಡ್ಜ್‌ಗಳ ಮೇಲೆ ಏಕಕಾಲಕ್ಕೆ ದಾಳಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 8:18 IST
Last Updated 7 ಫೆಬ್ರುವರಿ 2023, 8:18 IST
   

ಉಜಿರೆ (ದಕ್ಷಿಣ ಕನ್ನಡ): ಇಲ್ಲಿನ ಕೆಲವು ಲಾಡ್ಜ್‌ ಗಳಲ್ಲಿ ಅನೈತಿಕ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 5 ವಿಶೇಷ ತಂಡಗಳು ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ನೇತೃತ್ವದಲ್ಲಿ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದವು.

ಲಾಡ್ಜ್‌ ಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಹಾಗೂ ದಾಖಲಾತಿ ಪುಸ್ತಕಗಳನ್ನು (ರಿಜಿಸ್ಟರ್) ಪೊಲೀಸ್‌ ಅಧಿಕಾರಿಗಳು ಪರಿಶೀಲಿಸಿದರು.

'ಲಾಡ್ಜ್‌ ನಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ಲಾಡ್ಜ್‌ ನಲ್ಲಿ ಉಳಿದುಕೊಳ್ಳುವವರಿಂದ ಗುರುತಿನ ಚೀಟಿ ಪಡೆದು ರಿಜಿಸ್ಟ್ರರ್ ಪುಸ್ತಕಗಳಲ್ಲಿ ಸರಿಯಾಗಿ ದಾಖಲಿಸಬೇಕು. ಯಾವುದೇ ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅಂತಹ ಕೃತ್ಯಗಳು ಲಾಡ್ಜ್‌ ಪರಿಸರಗಳಲ್ಲಿ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಲಾಡ್ಜ್‌ ಗಳ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಸೂಚಿಸಿದರು.

ADVERTISEMENT

'ಯಾವುದೇ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಲಾಡ್ಜ್‌ಗಳ ಪರವಾನಗಿಯನ್ನು ರದ್ದುಪಡಿಸಲು ಕ್ರಮಕೈಗೊಳ್ಳಲಿದ್ದೇವೆ' ಎಂದು ಎಚ್ಚರಿಸಿದರು.

'ಕಾನೂನುಬಾಹಿರ ಚಟುವಟಿಕೆ ಕುರಿತು ಮಾಹಿತಿ ಬಂದಲ್ಲಿ ಮುಂದಿನ ದಿನಗಳಲ್ಲಿಯೂ ಈ ರೀತಿಯ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುವುದು' ಎಂದು ಪ್ರತಾಪ್ ಸಿಂಗ್ ಥೋರಾಟ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.