ADVERTISEMENT

229 ಜನರಲ್ಲಿ ಸೋಂಕು ದೃಢ

ಸೋಂಕಿತರಲ್ಲಿ 498 ಮಂದಿ ಗುಣಮುಖ; ಏಳು ಜನರ ಸಾವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:57 IST
Last Updated 12 ಆಗಸ್ಟ್ 2020, 15:57 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 229 ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ಬುಧವಾರ ಲಭಿಸಿದ ವರದಿಗಳಿಂದ ದೃಢಪಟ್ಟಿದೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆ 7,825ಕ್ಕೆ ತಲುಪಿದೆ.

‘ಮಂಗಳೂರು ತಾಲ್ಲೂಕಿನ 133, ಬಂಟ್ವಾಳ 45, ಪುತ್ತೂರು 22, ಬೆಳ್ತಂಗಡಿ 14 ಮತ್ತು ಸುಳ್ಯ ತಾಲ್ಲೂಕಿನ ಐವರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಪರೀಕ್ಷೆಗೊಳಗಾದ ಹೊರ ಜಿಲ್ಲೆಯ ಜನರ ಪೈಕಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಪತ್ತೆಯಾದ ಹೊಸ ಪ್ರಕರಣಗಳಲ್ಲಿ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 36, ಶೀತ ಜ್ವರದಿಂದ ಬಳಲುತ್ತಿದ್ದ (ಐಎಲ್‌ಐ) 113 ಮತ್ತು ಉಸಿರಾಟದ ತೀವ್ರ ತೊಂದರೆ (ಎಸ್‌ಎಆರ್‌ಐ) ಎದುರಿಸುತ್ತಿರುವ 11 ಜನರಿದ್ದಾರೆ. ಉಳಿದ 69 ಜನರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

71 ಪುರುಷರು ಮತ್ತು 46 ಮಹಿಳೆಯರು ಸೇರಿದಂತೆ 117 ಜನರಲ್ಲಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಅವರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 65 ಪುರುಷರು ಮತ್ತು 47 ಮಹಿಳೆಯರಲ್ಲಿ ಸೋಂಕಿನ ಲಕ್ಷಣಗಳಿಲ್ಲ. ಅವರನ್ನು ಮನೆಗಳಲ್ಲಿ ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ.

498 ಮಂದಿ ಗುಣಮುಖ: ಕೋವಿಡ್‌ ಸೋಂಕಿತರಾಗಿದ್ದ 498 ಮಂದಿಯ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಅವರು ಗುಣಮುಖರಾಗಿರುವುದು ಬುಧವಾರ ದೃಢಪಟ್ಟಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿದ್ದ 89 ಜನರನ್ನು ಬಿಡುಗಡೆ ಮಾಡಲಾಗಿದೆ. ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿದ್ದ 364 ಜನರ ಮೇಲಿನ ನಿಗಾವನ್ನು ಕೈಬಿಡಲಾಗಿದೆ.

ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ಸರಾಸರಿ 500ರಷ್ಟು ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಜಿಲ್ಲೆಯಲ್ಲಿ ಈ ವರೆಗೆ 5,232 ಜನರು ಸೋಂಕಿನಿಂದ ಗುಣಮುಖರಾಗಿದ್ದು, 2,349 ಸಕ್ರಿಯ ಪ್ರಕರಣಗಳಿವೆ.

ಏಳು ಸಾವು ಘೋಷಣೆ

ಕೋವಿಡ್‌ ಸೋಂಕಿತರ ಪೈಕಿ ಏಳು ಮಂದಿ ಮೃತಪಟ್ಟಿರುವುದನ್ನು ಜಿಲ್ಲಾಧಿಕಾರಿ ಬುಧವಾರ ಘೋಷಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಾವಿನ ಒಟ್ಟು ಸಂಖ್ಯೆ 244ಕ್ಕೇರಿದೆ.

‘ಮಂಗಳೂರು ತಾಲ್ಲೂಕಿನ ಇಬ್ಬರು, ಮೂಡುಬಿದಿರೆ ಮತ್ತು ಬಂಟ್ವಾಳ ತಾಲ್ಲೂಕಿನ ತಲಾ ಇಬ್ಬರು ಹಾಗೂ ಹೊರ ಜಿಲ್ಲೆಗಳ ಮೂವರು ಕೋವಿಡ್‌ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಎಲ್ಲರಿಗೂ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿದ್ದವು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.