ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ನಿಂದ ಐದನೇ ರೋಗಿ ಗುಣಮುಖ: ಬಿಡುಗಡೆ

ಆರು ದಿನಗಳಿಂದ ಯಾವುದೇ ಹೊಸ ಪ್ರಕರಣಗಳಿಲ್ಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 14:44 IST
Last Updated 10 ಏಪ್ರಿಲ್ 2020, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಆರು ದಿನಗಳಿಂದ ಕೋವಿಡ್‌–19 ನ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಇದರ ಜತೆಗೆ ಐದು ದಿನಗಳಲ್ಲಿ ಒಟ್ಟು ಐವರು ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ದುಬೈನಿಂದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿಗೆ ಬಂದಿದ್ದ 21 ವರ್ಷದ ಯುವಕನಲ್ಲಿ ಕೋವಿಡ್‌–19 ಸೋಂಕು ಪತ್ತೆಯಾಗಿತ್ತು. ಇದೀಗ ಈ ಯುವಕನೂ ಗುಣಮುಖನಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಇದೇ 21 ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಈ ಯುವಕ, 22 ರಂದು ಕಲ್ಲೇರಿಯ ಮನೆಗೆ ಬಂದಿದ್ದ. ನಂತರ ಈತ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದು, ಮಾರ್ಚ್‌ 24 ರಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾರ್ಚ್‌ 27 ರಂದು ಈತನಿಗೆ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿತ್ತು.

ADVERTISEMENT

ಸೋಂಕು ದೃಢಪಟ್ಟಿದ್ದರಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದೇ 7 ಮತ್ತು 8 ರಂದು ಈ ಯುವಕನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಕೋವಿಡ್‌–19 ಸೋಂಕು ನಿವಾರಣೆ ಆಗಿರುವುದು ದೃಢಪಟ್ಟಿದೆ. ಈ ಯುವಕ ಸಂಪೂರ್ಣ ಗುಣಮುಖನಾಗಿದ್ದರಿಂದ ಶುಕ್ರವಾರ ಆಸ್ಪತ್ರೆಯಿಂದ ಬಿಗುಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ಮೊದಲ ಸೋಂಕಿತ ವ್ಯಕ್ತಿ ಭಟ್ಕಳದ ಯುವಕ ಹಾಗೂ ಕಾಸರಗೋಡಿನ ಮೂವರು ಸೋಂಕಿತರು ಗುಣಮುಖರಾಗಿದ್ದು, ಅವರನ್ನು ಇದೇ 6 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ದೃಢಪಟ್ಟಿದ್ದು, ಇದೀಗ ಐವರು ಗುಣಮುಖರಾಗಿದ್ದಾರೆ. ಇನ್ನೂ ಏಳು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೋಂ ಕ್ವಾರಂಟೈನ್‌ ಸಂಖ್ಯೆ ಇಳಿಮುಖ: ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ವಿಮಾನ ನಿಲ್ದಾಣಗಳ ಮೂಲಕ ವಿದೇಶದಿಂದ ನಗರಕ್ಕೆ ಬಂದಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದರ ಪರಿಣಾಮವಾಗಿ ಸುಮಾರು 6 ಸಾವಿರ ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಕ್ವಾರಂಟೈನ್‌ನ 28 ದಿನಗಳ ಅವಧಿಯನ್ನು ಅರ್ಧಕ್ಕಿಂತ ಹೆಚ್ಚು ಜನರು ಪೂರೈಸಿದ್ದು, ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಈಗಾಗಲೇ ಸುಮಾರು 3 ಸಾವಿರ ಜನರು ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಿದ್ದು, ಇನ್ನು 2,945 ಜನರ ಹೋಂ ಕ್ವಾರಂಟೈನ್‌ನಲ್ಲಿ ಉಳಿದಿದ್ದಾರೆ.

ಅಲ್ಲದೇ ತಪಾಸಣೆಗೆ ಒಳಗಾಗುವವರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಶುಕ್ರವಾರ ಜಿಲ್ಲೆಯಲ್ಲಿ ಯಾವುದೇ ಶಂಕಿತ ವ್ಯಕ್ತಿಯ ತಪಾಸಣೆ ಮಾಡಲಾಗಿಲ್ಲ. ಹೊಸದಾಗಿ 9 ಜನರನ್ನು ವೈದ್ಯಕೀಯ ನಿಗಾಕ್ಕೆ ಸೇರ್ಪಡೆ ಮಾಡಲಾಗಿದೆ.

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಕೈಗೆ ಸೀಲ್ ಹಾಕಲಾಗುತ್ತದೆ. ಕಡ್ಡಾಯವಾಗಿ 28 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯು ಇವರ ಮೇಲೆ ನಿಗಾ ಇರಿಸಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.