ADVERTISEMENT

ಮಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ಬಿಗಿ ಕ್ರಮ, ಬಸ್‌ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 7:33 IST
Last Updated 8 ಜನವರಿ 2022, 7:33 IST
ನಗರದ ಮಂಗಳೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಪೊಲೀಸ್‌ ಸಿಬ್ಬಂದಿ.
ನಗರದ ಮಂಗಳೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಪೊಲೀಸ್‌ ಸಿಬ್ಬಂದಿ.   

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌ ಹಾಗೂ ಓಮೈಕ್ರಾನ್‌ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಶನಿವಾರ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಾಮಾನ್ಯವಾಗಿತ್ತು.

ಸ್ಟೇಟ್‌ ಬ್ಯಾಂಕ್‌, ಸೆಂಟ್ರಲ್‌ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಬಿಜೈ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಆದರು ಕೆಲ ಕಡೆಗಳಲ್ಲಿ ಅನಗತ್ಯವಾಗಿ ಜನರು ಓಡಾಡುವವರ ವಿರುದ್ಧ ಪೊಲೀಸರು ದಂಡಾಸ್ತ್ರ ಹಾಗೂ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ.

ಡಿಸಿಪಿ ಹರಿರಾಂ ಶಂಕರ್‌ ನೇತೃತ್ವದ ಪೊಲೀಸ್ ತಂಡವು ಮಂಗಳೂರಿನ ಕ್ಲಾಕ್ ಟವರ್‌ನಲ್ಲಿ ವಾಹನಗಳನ್ನು ತಪಾಸಣೆ ನಡೆಸಿದರು. ವಾರದ ದಿನಗಳಿಗೆ ಹೋಲಿಸಿದರೆ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ವಾರಾಂತ್ಯ ಕರ್ಫ್ಯೂ ಇರುವುದರಿಂದ ಕಡಿಮೆ ಇತ್ತು.

ADVERTISEMENT

ಶಾಲೆ ಮತ್ತು ಕಾಲೇಜುಗಳು ಮುಚ್ಚಿವೆ. ಕೆಲ ಕಾಲೇಜುಗಳು, ವಿದ್ಯಾರ್ಥಿಗಳ ಓದಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಆನ್‌ಲೈನ್ ತರಗತಿಗ ಪ್ರಾರಂಭಿಸಿವೆ.

ವಾರಾಂತ್ಯದ ಕರ್ಫ್ಯೂ ಕಟ್ಟುನಿಟ್ಟಾದ ಅನುಷ್ಠಾನಕ್ಕಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 36 ಚೆಕ್ ಪೋಸ್ಟ್‌ ಹಾಕಾಲಾಗಿದ್ದು, ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು ತೆರೆದಿರುತ್ತವೆ. ಯಾರೂ ಕೂಡ ಅನಗತ್ಯವಾಗಿ ರಸ್ತೆಗಿಳಿಯಬಾರದು. ಬೇಕಾಬಿಟ್ಟಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡಿ ದಂಡ ಹಾಕಲಾಗುತ್ತದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ನಗರದ ಪ್ರಮುಖ ದೇವಾಲಯಗಳಲ್ಲಿ ಭಕ್ತರು ಇಲ್ಲದೆ ಇರುವುದರಿಂದ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಶ್ರೀ ಕ್ಷೇತ್ರ ಧರ್ಮಸ್ಥಳವು ತುಲಾಭಾರ ಸೇರಿದಂತೆ ಎಲ್ಲಾ ಸೇವೆಗಳ ಆನ್‌ಲೈನ್ ಬುಕಿಂಗ್ ಸ್ಥಗಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.