ADVERTISEMENT

ಕೋವಿಡ್‌: ಮಹಿಳೆಗೆ ಆತಂಕ ತಂದಿತ್ತ ತಪ್ಪು ಮಾಹಿತಿ

ಬುಲೆಟನ್‌ನಲ್ಲಿ ಪಾಸಿಟಿವ್‌; ಪ್ರಯೋಗಾಲಯ ವರದಿ ನೆಗೆಟಿವ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 6:16 IST
Last Updated 20 ಜುಲೈ 2020, 6:16 IST

ಮಂಗಳೂರು: ಸೌದಿ ಅರೇಬಿಯಾದಿಂದ ಊರಿಗೆ ಬಂದು, ಕ್ವಾರಂಟೈನ್‌ನಲ್ಲಿದ್ದ ಮಹಿಳೆಯೊಬ್ಬರ ಕೋವಿಡ್‌–19 ಪರೀಕ್ಷಾ ವರದಿಯಲ್ಲಿ ಉಂಟಾದ ಗೊಂದಲದಿಂದ ಮನೆಯವರು ಆತಂಕಕ್ಕೆ ಒಳಗಾದರು.

ಅಡ್ಯಾರ್‌ ಪಂಚಾಯಿತಿ ವ್ಯಾಪ್ತಿಯ ವಳಚ್ಚಿಲ್‌ ಪದವು ನಿವಾಸಿ 30 ವರ್ಷದ ಆರು ತಿಂಗಳ ಗರ್ಭಿಣಿ, ತನ್ನ ಎರಡು ವರ್ಷದ ಮಗನೊಂದಿಗೆ ಇದೇ 14ರಂದು ಮಂಗಳೂರಿಗೆ ಬಂದಿದ್ದರು. ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಹಾಗೂ ಮಗನ ಗಂಟಲು ದ್ರವದ ಮಾದರಿಯನ್ನು ಇದೇ 15 ರಂದು ಪರೀಕ್ಷೆಗೆ ಕಳುಹಿಸಲಾತ್ತು.

18ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ಅಡ್ಯಾರ್ ಗ್ರಾಮ ಪಂಚಾಯಿತಿ ಗ್ರಾಮ ಕರಣಿಕರು, ಮಂಗಳೂರು ತಾಲ್ಲೂಕು ಆರೋಗ್ಯ ಕೇಂದ್ರದಿಂದ ಮಹಿಳೆಗೆ ಪ್ರತ್ಯೇಕ ಕರೆಗಳು ಬಂದಿದ್ದು, ಕೋವಿಡ್–19 ದೃಢಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಅಂದು ಸಂಜೆಯ ವೇಳೆ ಬಂದ ಪ್ರಯೋಗಾಲಯದ ವರದಿಯಲ್ಲಿ ಮಹಿಳೆಗೆ ನೆಗೆಟಿವ್‌ ಎಂದು ತೋರಿಸಲಾಗಿದೆ. ಈ ಗೊಂದಲದಿಂದಾಗಿ ಮಹಿಳೆ ಹಾಗೂ ಆಕೆಯ ಮನೆಯವರು ಮತ್ತೆ ಆತಂಕಕ್ಕೊಳಗಾಗಿದ್ದರು.

ADVERTISEMENT

‘ಆರೋಗ್ಯ ಇಲಾಖೆಯ ವರದಿಯಿಂದಾಗಿ ನಾವು ಗೊಂದಲಕ್ಕೆ ಒಳಗಾಗಿದ್ದೆವು. ಪ್ರಯೋಗಾಲಯ ನಂಬಬೇಕೋ ಅಥವಾ ಆರೋಗ್ಯ ಇಲಾಖೆ ನೀಡಿದ ವರದಿಯನ್ನು ನಂಬಬೇಕೋ ಎಂದು ನಮಗೆ ತಿಳಿಯುತ್ತಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಾನು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇನೆ’ ಎಂದು ಮಹಿಳೆಯ ಸಹೋದರ ಮುಹಮ್ಮದ್‌ ಇಕ್ಬಾಲ್‌ ತಿಳಿಸಿದ್ದರು.

‘ಮಹಿಳೆಗೆ ಕೊರೊನಾ ನೆಗೆಟಿವ್‌ ಬಂದಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಅಡ್ಯಾರ್‌ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಾಧಿಕಾರಿ ವಿವರಣೆ ನೀಡಿದ್ದರು.

ಭಾನುವಾರ ಬೆಳಿಗ್ಗೆ ಈ ಗೊಂದಲವನ್ನು ಪರಿಹರಿಸಲಾಗಿದ್ದು, ಪ್ರಯೋಗಾಲಯದ ವರದಿಯನ್ನು ಅಧಿಕಾರಿಗಳಿಗೆ ತೋರಿಸಿದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಈ ಮಹಿಳೆಗೆ ಕೋವಿಡ್–19 ನೆಗೆಟಿವ್‌ ಇರುವುದನ್ನು ದೃಢಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ತವರಿಗೆ ಮರಳಿದ 346 ಮಂದಿ

ಮಂಗಳೂರು: ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಶಾರ್ಜಾ ಮತ್ತು ದಮಾಮ್‌ನಿಂದ ಎರಡು ವಿಮಾನಗಳು ನಗರಕ್ಕೆ ಬಂದಿದ್ದು, ಒಟ್ಟು 346 ಮಂದಿ ಶನಿವಾರ ರಾತ್ರಿ ತಾಯ್ನಾಡಿಗೆ ಮರಳಿದರು.

ಶಾರ್ಜಾದಿಂದ ಬಂದ ಏರ್‌ ಇಂಡಿಯಾ ವಿಮಾನದಲ್ಲಿ 168 ಮಂದಿ ಹಾಗೂ ದಮಾಮ್‌ನಿಂದ ಬಂದ ಬಾಡಿಗೆ ವಿಮಾನದಲ್ಲಿ 178 ಮಂದಿ ಕನ್ನಡಿಗರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಗರ್ಭಿಣಿಯರು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು, ಮಕ್ಕಳು ಸೇರಿದಂತೆ ತುರ್ತಾಗಿ ತಾಯ್ನಾಡಿಗೆ ಮರಳಬೇಕಿದ್ದವರಿಗೆ ಆದ್ಯತೆ ನೀಡಲಾಗಿತ್ತು. ಎಲ್ಲರಿಗೂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ತಪಾಸಣೆ ನಡೆಸಲಾಗಿದ್ದು, ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಅವಧಿಯಲ್ಲಿ ಎಲ್ಲ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ, ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.