
ಮಂಗಳೂರು: ಅರಳ ಗ್ರಾಮದಲ್ಲಿ ಮನೆಯ ಸಮೀಪದ ಶೆಡ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು, ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ. ಆತನ ಶೆಡ್‌ನಲ್ಲಿ ಪತ್ತೆಯಾದ 150 ಕೆ.ಜಿಗಳಷ್ಟು ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳದಲ್ಲಿ ಕಟ್ಟಿಹಾಕಿದ್ದ 3 ದನಗಳನ್ನು ಹಾಗೂ 1 ಕರುವನ್ನು ರಕ್ಷಣೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಆರೋಪಿಯ ಮನೆ ಮತ್ತು ಶೆಡ್ ಆವರಣವನ್ನು ಜಪ್ತಿ ಮಾಡಿದ್ದಾರೆ.
ಬಂಟ್ವಾಳ ತಾಲ್ಲೂಕು ಮೈಯದಿ (57) ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿ ಮಯ್ಯದಿಯು ಮನೆಯ ಆವರಣದಲ್ಲಿರುವ ಶೆಡ್‌ನಲ್ಲಿ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದಾಗ ಶೆಡ್‌ನಲ್ಲಿ ಮೂವರು ಸೇರಿಕೊಂಡು ದನಗಳನ್ನು ಕೊಂದು ಮಾಂಸ ಮಾಡುತ್ತಿದ್ದುದು ಕಂಡುಬಂತು. ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾದರು. ಆರೋಪಿ ಮಯ್ಯದಿ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೃತ್ಯದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 2020ರ ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆ, ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಯಾವುದೇ ಪರವಾನಗಿ ಪಡೆಯದೆಯೇ ಮನೆಯ ಆವರಣದ ಶೆಡ್‌ನಲ್ಲಿ ಕಸಾಯಿಖಾನೆ ನಿರ್ಮಿಸಿ ಅಲ್ಲಿ ವಧೆ ನಡೆಸಿರುವುದು ಕಂಡುಬಂದಿದೆ. ಶೆಡ್‌ಗೆ ಮನೆಯಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಆ ಮನೆ ಹಾಗೂ ಶೆಡ್‌ನ ಆವರಣವನ್ನು ಮುಟ್ಟುಗೋಲು ಹಾಕುವಂತೆ ಮಂಗಳೂರು ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.