ಸುಬ್ರಹ್ಮಣ್ಯ: 'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಕಾನೂನಿನ ಕಟ್ಟುನಿಟ್ಟು ಪಾಲನೆಯಿಂದಾಗಿ ರಾಜ್ಯದಲ್ಲಿ ಅಪರಾಧ ಪ್ರಮಾಣ ಇಳಿಕೆಯಾಗಿದೆ. ಕಠಿಣ ಕ್ರಮಕೈಗೊಂಡಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಅಪರಾಧಗಳ ಚಟುವಟಿಕೆ ಕುರಿತ ಮಾಹಿತಿ ಪಡೆಯಲಾಗಿತ್ತು. ಅದರ ಪ್ರಕಾರ ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ’ ಎಂದರು.
‘ಕೋಮು ಹಿಂಸಾಚಾರ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ರಚಿಸಿರುವುದು ಇಲ್ಲಿನ ಶಾಂತಿ ಕಾಪಾಡುವುದಕ್ಕೆ ಪೂರಕವಾಗಿದೆ. ಈ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಬೆಂಗಳೂರು ಬಳಿಕ ಅತಿ ವೇಗವಾಗಿ ಬೆಳೆಯುವ ಅವಕಾಶಗಳಿರುವುದು ಕರಾವಳಿಗೆ. ಇಲ್ಲಿ ಶಾಂತಿ ಕಾಪಾಡುವುದು ಅತೀ ಮುಖ್ಯ. ಅದಕ್ಕಾಗಿ ಈ ಭಾಗಕ್ಕೆ ಹೆಚ್ಚು ಗಮನ ಹರಿಸುತ್ತೇವೆ’ ಎಂದರು.
‘ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ನೇಮಕಾತಿ ನಡೆಯುತ್ತಿದೆ. 545 ಎಸ್‌ಐಗಳ ನೇಮಕಾತಿ ಆದೇಶ ನೀಡಲಾಗಿದ್ದು, ಅವರು ತರಬೇತಿ ಪಡೆಯುತ್ತಿದ್ದಾರೆ. ಇನ್ನೂ 402 ಹುದ್ದೆಗಳಿಗೆ ನೇಮಕಾತಿ ಆದೇಶವಾಗಲಿದೆ. 15 ಸಾವಿರದಷ್ಟು ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೂ ಕ್ರಮಕೈಗೊಳ್ಳುತ್ತೇವೆ’ ಎಂದರು.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಕಡೆ ಹೆಚ್ಚುವರಿ ಪೊಲೀಸ್ ಹೊರ ಠಾಣೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದ ಈ ಬಗ್ಗೆ ಪ್ರಸ್ತಾವನೆ ಬಂದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ’ ಎಂದರು.
‘ಎರಡು ಠಾಣೆಗಳಿಗೆ ಒಂದರಂತೆ 112 ಪೊಲೀಸ್ ವಾಹನಗಳಿವೆ. ಪ್ರತಿ ಠಾಣೆಗೂ ಒಂದು ವಾಹನ ಬೇಕು ಎಂಬ ಬೇಡಿಕೆ ಇದದು, ಈಡೇರಿಸಲು ಕ್ರಮವಹಿಸುತ್ತೇವೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ 15 ವರ್ಷ ಹಳೆಯ ವಾಹನಗಳ ಬಳಕೆ ನಿಲ್ಲಿಸುತ್ತಿದ್ದೇವೆ. ಅದರ ಬದಲು ಹೊಸ ವಾಹನ ನೀಡಲಾಗುತ್ತಿದೆ. ಗೃಹರಕ್ಷಕ ದಳದ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂಬ ಬೇಡಿಕೆ ಬಗ್ಗೆ ಗಮನ ಹರಿಸುತ್ತೇವೆ’ ಎಂದರು.
ಸಚಿವ ಜಿ.ಪರಮೇಶ್ವರ ಅವರನ್ನು ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖರು ಸ್ವಾಗತಿಸಿದರು. ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಸಚಿವರು ಸ್ಥಳೀಯರ ಜೊತೆ ಚರ್ಚಿಸಿದರು.
‘ಮಂಗಳೂರಿನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸಾಧಕ-ಬಾಧಕ ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಜಿ.ಪರಮೇಶ್ವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.