ADVERTISEMENT

ರಾಜ್ಯವನ್ನೇ ನಡುಗಿಸಿದ್ದ 4 ಕೊಲೆ ಕೇಸ್: ಹಂತಕನ ಬಿಡುಗಡೆಗೆ ಕುಟುಂಬಸ್ಥರಿಂದ ವಿರೋಧ

ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 7:11 IST
Last Updated 10 ಆಗಸ್ಟ್ 2022, 7:11 IST
ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.   

ಮಂಗಳೂರು:ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ಹಂತಕ ಪ್ರವೀಣ್ ಕುಮಾರ್ ಜೈಲಿನಿಂದ ಬಿಡುಗಡೆಯಾದರೆ ತಮ್ಮೆಲ್ಲರ ಜೀವಕ್ಕೆ ಅಪಾಯವಿದ್ದು, ಯಾವುದೇ ಕಾರಣಕ್ಕೂ ಆತನನ್ನು ಬಿಡುಡೆಗೊಳಿಸಬಾರದು ಎಂದು ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಹಂತಕ ಪ್ರವೀಣ್ ಕುಮಾರ್ ಪತ್ನಿ ಅನಸೂಯಾ ಹಾಗೂ ಕೊಲೆಯಾದವರ ನಿಕಟ ಸಂಬಂಧಿಗಳು ಸೇರಿದಂತೆ 50ಕ್ಕೂ ಹೆಚ್ಚು ಜನರು ಕಮಿಷನರ್‌ ಭೇಟಿಯಾಗಿ ತಮ್ಮ ಅಭಿಪ್ರಾಯ ಹೇಳಿಕೊಂಡರು. ಹತ್ತಿರದ ಸಂಬಂಧಿಕರನ್ನೇ ಕೊಲೆ ಮಾಡಿರುವ ಪ್ರವೀಣ್ ಕುಮಾರ್ ಸಮಾಜಕ್ಕೆ ಕಂಟಕನಾಗಿದ್ದು, ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು, ಕಮಿಷನರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

‘ಪ್ರವೀಣ್ ಕುಮಾರ್ ಬಿಡುಗಡೆಯಾದರೆ ನನ್ನ ಹಾಗೂ ಕುಟುಂಬಕ್ಕೆ ಅಪಾಯವಿದೆ. ಯಾವುದೇ ಕಾರಣಕ್ಕೂ ಆತನನ್ನು ಬಿಡುಗಡೆ ಮಾಡಬಾರದು’ ಎಂದು ಅನಸೂಯಾ ವಿನಂತಿಸಿದರು.

ADVERTISEMENT

ಕೊಲೆಯಾಗಿದ್ದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಗುರುಪುರ ಮಾತನಾಡಿ,‘ಪ್ರವೀಣ್‌ ಕುಮಾರ್ ಜೈಲಿನಲ್ಲಿದ್ದಾಗ ಒಮ್ಮೆಗೆ ಭೇಟಿಗೆ ಹೋದ ಸಂದರ್ಭದಲ್ಲಿ, ತಾನು ನಾಲ್ಕು ಕೊಲೆ ಮಾಡಿದ್ದು, ನಿಮ್ಮನ್ನೂ ಕೊಲೆ ಮಾಡುತ್ತೇನೆ ಎಂದು ನನಗೆ ಬೆದರಿಕೆ ಹಾಕಿದ್ದ’ ಎಂದರು.

ಘಟನೆ ಹಿನ್ನೆಲೆ: ಪ್ರವೀಣ್ ಕುಮಾರ್ ತನ್ನ ತಂದೆಯ ಅಕ್ಕ ಅಪ್ಪಿ ಶೇರಿಗಾರ್ತಿ ಸೇರಿದಂತೆ ಮನೆಯಲ್ಲಿದ್ದ ನಾಲ್ಕು ಮಂದಿಯನ್ನು 1994ರ ಫೆಬ್ರವರಿ 23ರ ಮಧ್ಯರಾತ್ರಿ ಕೊಲೆ ಮಾಡಿ, ಸುಮಾರು ₹ 80 ಸಾವಿರ ಮೌಲ್ಯದ ಚಿನ್ನಾಭರಣ, ₹ 5,000 ನಗದು ಎಗರಿಸಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸಾಗಿಸುತ್ತಿದ್ದ ವೇಳೆ ತಪ್ಪಿಸಿಕೊಂಡಿದ್ದ ಆರೋಪಿ ಸುಮಾರು ನಾಲ್ಕು ವರ್ಷಗಳ ಕಾಲ ಗೋವಾದಲ್ಲಿ ತಲೆ ಮರೆಸಿಕೊಂಡಿದ್ದ. ಕೊಲೆಗೆ ಮುನ್ನವೇ ವಿವಾಹಿತನಾಗಿದ್ದ ಆತ ಗೋವಾದಲ್ಲಿ ತಲೆ ಮರೆಸಿಕೊಂಡಿದ್ದ ಸಂದರ್ಭದಲ್ಲಿ ಮತ್ತೆ ಮದುವೆಯಾಗಿದ್ದ. ಆ ವೇಳೆ ಆತನ ಪತ್ತೆಗೆ ಬಹುಮಾನದ ಘೋಷಿಸಲಾಗಿತ್ತು. ಆಗ ಆತ ಎರಡನೇ ವಿವಾಹವಾಗಿದ್ದ ಮಹಿಳೆಯ ತಮ್ಮನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ನಂತರ ಮತ್ತೆ ಅವನನ್ನು ಬಂಧಿಸಲಾಗಿತ್ತು ಎಂದು ಸೀತಾರಾಮ ಗುರುಪುರ ಭಾವುಕರಾಗಿ ವಿವರಿಸಿದರು.

‘ಪ್ರವೀಣನಿಗೆ ಗಲ್ಲು ಶಿಕ್ಷೆಯಾಗಿದ್ದರಿಂದ ನೆಮ್ಮದಿಯಿಂದ ಇದ್ದೆವು. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸನ್ನಡತೆ ಆಧಾರದಲ್ಲಿ ಆತನ ಬಿಡುಗಡೆ ಬಗ್ಗೆ ನಮ್ಮ ಕುಟುಂಬಕ್ಕೆ ಮಾಹಿತಿ ದೊರಕಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಆತ ಜೈಲಿನಲ್ಲೇ ಇರಬೇಕು. ಈ ಸಂಬಂಧ ಶಾಸಕರಿಗೂ ಮನವಿ ಸಲ್ಲಿಸಿ, ವಿನಂತಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.