ADVERTISEMENT

ಮಂಗಳೂರು: ಸೈಕಲ್ ಟ್ರ್ಯಾಕ್‌, ಪೆಡೆಲ್‌ ತುಳಿದ ಸವಾರರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 8:23 IST
Last Updated 28 ಸೆಪ್ಟೆಂಬರ್ 2020, 8:23 IST
ಮಂಗಳೂರಿನಲ್ಲಿ ಭಾನುವಾರ ಸೈಕಲ್ಸ್ ಫಾರ್ ಚೇಂಜ್ 10 ಕಿ.ಮೀ. ಜಾಥಾದಲ್ಲಿ ಭಾಗವಹಿಸಿದ್ದ ಸೈಕಲ್‌ ಸವಾರರು. ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಭಾನುವಾರ ಸೈಕಲ್ಸ್ ಫಾರ್ ಚೇಂಜ್ 10 ಕಿ.ಮೀ. ಜಾಥಾದಲ್ಲಿ ಭಾಗವಹಿಸಿದ್ದ ಸೈಕಲ್‌ ಸವಾರರು. ಪ್ರಜಾವಾಣಿ ಚಿತ್ರ   

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಸೈಕಲ್ ಟ್ರ್ಯಾಕ್‌ ಕುರಿತು ಜಾಗೃತಿ ಮೂಡಿಸಲು ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಸೈಕಲ್ಸ್ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ 65 ಕ್ಕೂ ಅಧಿಕ ಸೈಕಲ್‌ ಸವಾರರು ಭಾಗವಹಿಸಿದ್ದರು.

6 ರಿಂದ 60 ವರ್ಷದವರೆಗಿನ ಸೈಕಲ್ ಸವಾರರು ಉದ್ದೇಶಿತ ಸೈಕಲ್ ಟ್ರ್ಯಾಕ್‌ನ 10 ಕಿ.ಮೀ. ಮಾರ್ಗದಲ್ಲಿ ಪೆಡಲ್‌ಗಳನ್ನು ತುಳಿದರು. ಶಾಲೆ–ಕಾಲೇಜುಗಳ ಮೂಲಕ ಹಾದು ಹೋಗುವ ಈ ಸೈಕಲ್ ಟ್ರ್ಯಾಕ್‌ನ ಮೂಲಕ ಪರಿಸರ ಸ್ನೇಹಿ ವಾತಾವರಣ ಕಲ್ಪಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ.

ವಿ ಆರ್ ಸೈಕಲಿಂಗ್‌ನ ಹಿರಿಯ ಸದಸ್ಯರು, ಕಿರಿಯ ಸದಸ್ಯರಿಗೆ ದಾರಿಯುದ್ದಕ್ಕೂ ಮಾರ್ಗದರ್ಶನ ನೀಡಿದರು. ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಸೈಕಲ್‌ ಸವಾರಿಗೆ ಉತ್ತೇಜಿಸಿದರು. ಈ ಸೈಕಲ್ ಟ್ರ್ಯಾಕ್‌ ಮೂಲಕ ವಿದ್ಯಾರ್ಥಿಗಳು ಸೈಕಲ್‌ಗಳಲ್ಲಿಯೇ ತಮ್ಮ ಶಾಲಾ–ಕಾಲೇಜುಗಳನ್ನು ತಲುಪಬಹುದಾಗಿದೆ. ಸೈಕಲ್‌ ಟ್ರ್ಯಾಕ್‌ ಉದ್ಘಾಟನೆಯ ನಂತರ ಎಲ್ಲ ರೀತಿಯ ಸೈಕಲ್‌ ಸವಾರರಿಗೆ ಇದು ಮುಕ್ತವಾಗಲಿದೆ.

ADVERTISEMENT

ಸಂಯೋಜಕ ಹರೀಶ್‌ ರಾಜ್‌, ವಿ ಆರ್ ಸೈಕಲಿಂಗ್‌ನ ಸದಸ್ಯರು, ಸ್ಮಾರ್ಟ್‌ ಸಿಟಿಯ ಸೈಕಲ್ಸ್‌ ಫಾರ್ ಚೇಂಜ್‌ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಲಾಯಿತು. ಮಾಸ್ಕ್‌ ಧಾರಣೆ, ಸುರಕ್ಷಿತ ಅಂತರ ಕಾಪಾಡುವಿಕೆ ಸೇರಿದಂತೆ ಅಗತ್ಯ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗಿತ್ತು.

ನಂತರ ನಡೆದ ಸಮಾರಂಭದಲ್ಲಿ ಹಲವು ಸೈಕಲ್ ಸವಾರರು ತಮ್ಮ ಅನುಭವ ಹಂಚಿಕೊಂಡರು. ಸೈಕಲ್‌ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಸೈಕಲ್ ಟ್ರ್ಯಾಕ್‌ ನಿರ್ಮಾಣದ ಕುರಿತು ಸಲಹೆಗಳನ್ನು ನೀಡಿದರು.

ಮೇಯರ್ ದಿವಾಕರ್ ಪಾಂಡೇಶ್ವರ, ಸೈಕಲ್ ಫಾರ್ ಚೇಂಜ್‌ನ ನಿರೇನ್‌ ಜೈನ್‌, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ನಜೀರ್‌, ತಾಂತ್ರಿಕ ವಿಭಾಗದ ಮಹಾಪ್ರಬಂಧಕ ಅರುಣ್‌ ರಾವ್‌, ನೋಡಲ್‌ ಅಧಿಕಾರಿ ಚಂದ್ರಕಾಂತ್‌, ಸ್ಮಾರ್ಟ್‌ ಸಿಟಿ ಅಧಿಕಾರಿಗಲಾದ ಮಂಜು ಕೀರ್ತಿ, ಮೊಹಮ್ಮದ್ ಸಬೀತ್‌, ಅರ್ಚನಾ ಸುದೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.