ADVERTISEMENT

ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹಾನಿ

ಹಲವು ಮನೆಗಳು ಭಾಗಶಃ ಕುಸಿತ, ವಿವಿಧೆಡೆ ರಸ್ತೆ– ನಿವೇಶನ ಜಲಾವೃತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:39 IST
Last Updated 3 ಜುಲೈ 2022, 2:39 IST
ಮಾಲಾಡಿ ಶಕ್ತಿನಗರದ ಕುಸುಮಾವತಿ ಅವರ ಮನೆ ಕುಸಿದಿರುವುದು
ಮಾಲಾಡಿ ಶಕ್ತಿನಗರದ ಕುಸುಮಾವತಿ ಅವರ ಮನೆ ಕುಸಿದಿರುವುದು   

ಬೆಳ್ತಂಗಡಿ: ತಾಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.

ಉಜಿರೆಯ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಸವಾರರು, ಪಾದಚಾರಿಗಳು ಪರದಾಡಿದರು. ವಾರದ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚರಂಡಿ ದುರಸ್ತಿ ಪಡಿಸಿದ್ದರೂ ಮತ್ತೆ ಸಮಸ್ಯೆ ಉಲ್ಬಣಿಸಿದೆ. ಉಜಿರೆಯಿಂದ ಚಾರ್ಮಾಡಿ ತನಕದ ಸುಮಾರು 20ಕಿ.ಮೀ. ಹೆದ್ದಾರಿ ವ್ಯಾಪ್ತಿಯಲ್ಲಿ ಮಳೆಯಿಂದ ಸಮಸ್ಯೆ ಎದುರಾಯಿತು.

ಮುಂಡಾಜೆ ಗ್ರಾಮದ ಸೀಟು ಬಳಿ ಮರವೊಂದು ತಂತಿ ಮೇಲೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಮೃತ್ಯುಂಜಯ, ನೇತ್ರಾವತಿ ನದಿಗಳ ಹರಿವು ಹೆಚ್ಚಿದೆ.

ADVERTISEMENT

ಉಜಿರೆ ಗಾಂಧಿನಗರದಲ್ಲಿ ಮೋರಿಯೊಂದು ಭಾಗಶಃ ಕುಸಿದಿದೆ. ಮಾಲಾಡಿಯಲ್ಲಿ ಮಳೆಗೆ ಶಕ್ತಿನಗರದ ಕುಸುಮಾವತಿ ಎಂಬವರ ಮನೆ ಬಹುತೇಕ ಕುಸಿದು ಬಿದ್ದಿದೆ.

ಮಳೆ ಹಾನಿ

ಮುಡಿಪು: ಉಳ್ಳಾಲ ತಾಲ್ಲೂಕಿನ ಕೊಣಾಜೆ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿ ಉಂಟಾಗಿದೆ.

ಪಜೀರು ಗ್ರಾಮದ ಅಡ್ಕ ಎಂಬಲ್ಲಿ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಹರೇಕಳ ಗ್ರಾಮದ ಮೈಮುನ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಬೆಳ್ಮ ಬದ್ಯಾರು ಅಬ್ದುಲ್ ರಹಿಮಾನ್ ಎಂಬವರ ಮನೆಯ ಕಾಂಪೌಂಡ್‌ ಕುಸಿದು ಬಿದ್ದಿದೆ. ಅಂಬ್ಲಮೊಗರು ಅಂಗನವಾಡಿ ಕೇಂದ್ರದ ಬಳಿ ಗುಡ್ಡ ಕುಸಿದು ಬಿದ್ದಿದೆ. ಮದಕ ಬಳಿಯೂ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ. ಕೋಟೆಕಾರು ಪನೀರ್ ಹಾಗೂ ಅಬುಸಾಲಿ ಹಾಗೂ ಅಬ್ದುಲ್ ಕರೀಂ ಮನೆಯ ಬಳಿ ಗುಡ್ಡ ಕುಸಿದಿದೆ.

ಅಪಾಯದಲ್ಲಿ ಮನೆ

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ತೋಡಿನ ಬದಿ ಕುಸಿದು ಮನೆಯೊಂದು ಅಪಾಯದಲ್ಲಿದೆ.
ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜದ ರಾಮಣ್ಣ ಪಿಲಿಂಜ ಅವರಿಗೆ ಸೇರಿದ ಮನೆಯ ಪಕ್ಕದಲ್ಲಿ ತೋಡು ಇದ್ದು, ಮಳೆಗೆ ಬದಿ ಕುಸಿದು ಬಿದ್ದಿದೆ. ಇದರಿಂದ ಮನೆಯೂ ಅಪಾಯದ ಅಂಚಿನಲ್ಲಿದ್ದು, ಈಗಾಗಲೇ ಮನೆಯ ಮಣ್ಣಿನ ಗೋಡೆ ಬಿರುಕು ಬಿಟ್ಟಿದೆ. ಈ ಮನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 15 ಮಂದಿ ವಾಸಿಸುತ್ತಿದ್ದು, ಆತಂಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.