ADVERTISEMENT

ಹೆಣ್ಣು ಮಕ್ಕಳಲ್ಲಿ ಜಾಗೃತಿ ಅವಶ್ಯ: ಡಾ. ರಾಜೇಂದ್ರ ಕೆ.ವಿ

ಜಿಲ್ಲಾ ಮಟ್ಟದ ‘ಸುಗ್ರಾಮ ಸಮಾವೇಶ’ದಲ್ಲಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 13:48 IST
Last Updated 25 ಏಪ್ರಿಲ್ 2022, 13:48 IST
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಸುಗ್ರಾಮ ಸಮಾವೇಶವನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಸುಗ್ರಾಮ ಸಮಾವೇಶವನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಉದ್ಘಾಟಿಸಿದರು.   

ಮಂಗಳೂರು: ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳ ಜೊತೆಗೆ ಇತರ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

ಜನ ಶಿಕ್ಷಣ ಟ್ರಸ್ಟ್, ಜಿಲ್ಲಾ ಪಂಚಾಯಿತಿ, ಹಂಗರ್ ಪ್ರಾಜೆಕ್ಟ್, ಎಪಿಇಐ ಸಹಯೋಗದಲ್ಲಿ ‘ಜಾಗೃತ ನಾರಿ- ಪ್ರಗತಿಗೆ ದಾರಿ’ ಧ್ಯೇಯವಾಕ್ಯದೊಂದಿಗೆ ನಗರದ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ಬಂಟ್ವಾಳ,
ಉಳ್ಳಾಲ, ಪುತ್ತೂರು ಮತ್ತು ಕಡಬ ತಾಲ್ಲೂಕುಗಳ ಸುಗ್ರಾಮ- ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯೆಯರ ಜಿಲ್ಲಾ ಮಟ್ಟದ ‘ಸುಗ್ರಾಮ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇನ್ನೂ ಶಾಲೆಯಿಂದ ಹೊರಗುಳಿದ ಮಕ್ಕಳು, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಇದ್ದಾರೆ. ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ವಲಸೆ ಬಂದಿರುವ ಕಾರ್ಮಿಕರ ಮಕ್ಕಳಲ್ಲಿ ಹಲವರು
ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಮಾಸಿಕ ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಶೇ 50ಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಅನೇಕ ಮಕ್ಕಳು ಕಲಿಕೆಯಿಂದ ಹಿಂದುಳಿದಿದ್ದಾರೆ. ಈ ಬಗ್ಗೆ ಮಹಿಳೆಯರು ಮುಜುಗರವಿಲ್ಲದೆ ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು. ಹೆಣ್ಣು ಮಕ್ಕಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಇಮ್ಮಡಿಗೊಳಿಸಲು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗೌರವಧನ ಹೆಚ್ಚಳ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ವಿಧಾನಸಭೆ ವಿರೋಧಪಕ್ಷ ಉಪನಾಯಕ ಯು.ಟಿ.ಖಾದರ್ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇ 50 ಮಹಿಳಾ ಮೀಸಲಾತಿಯಿಂದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಪರ್ವಕಾಲ ಎದುರಾಗಿದೆ. ಗ್ರಾಮಸಭೆಗಳು ಕಾಟಾಚಾರಕ್ಕೆ ನಡೆಯದೆ ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡಬೇಕು. ಮನೆಯನ್ನು ಬೆಳಗುವ ಮಹಿಳೆಯರು ಇಡೀ ಸಮಾಜವನ್ನು, ಜಗತ್ತನ್ನು ಬೆಳಗುವ ದೈವದತ್ತವಾದ ಶಕ್ತಿಯನ್ನು
ಪಡೆದಿದ್ದಾರೆ’ ಎಂದರು.

ಜನ ಶಿಕ್ಷಣ ಟ್ರಸ್ಟ್‌ ನಿರ್ದೇಶಕರಾದ ಶೀನಶೆಟ್ಟಿ ಮತ್ತು ಕೃಷ್ಣ ಮೂಲ್ಯ ಸಂವಾದ ಕಾರ್ಯಕ್ರಮ ಮುನ್ನಡೆಸಿದರು. ಚೇತನ್ ಕಾರ್ಯಕ್ರಮ ನಿರೂಪಿಸಿದರು. ಸುಗ್ರಾಮ ಮುಖಂಡರಾದ ಶಕೀಲ, ಮಾಲತಿ ಇದ್ದರು.

ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಗ್ರಾಮ ಪಂಚಾಯಿತಿ, ಗ್ರಾಮ ಸಭೆಗಳ ಬಲವರ್ಧನೆ, ಸ್ವಚ್ಛ, ಕಸಮುಕ್ತ ಗ್ರಾಮ, ಸುಸ್ಥಿರ ಅಭಿವೃದ್ಧಿ ಕುರಿತು ‘ಸುಗ್ರಾಮ’ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರು ಸಂಕಲ್ಪ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.