
ಮಂಗಳೂರು: ನಗರದ ಜಪ್ಪಿನಮೊಗರುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಶಾಲಾ ವಾಹನ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಿಂತ ಹೆಚ್ಚು ಕಾಣಸಿಗುವುದು ಖಾಸಗಿ ಬಸ್‌ಗಳು.
ಆವರಣ ಗೋಡೆ ಇಲ್ಲದಿರುವುದರಿಂದ ಇಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ತೆರೆದಿಟ್ಟಂತೆ ಆಗಿದೆ. ರಾತ್ರಿ ಪರವೂರಿಗೆ ಹೋಗುವ ಬಸ್‌ಗಳು ದಿನಿವಿಡೀ ಇಲ್ಲಿ ನಿಲ್ಲುತ್ತವೆ. ಇದರಿಂದ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ, ಶಿಕ್ಷಕರಿಗೂ ಕಿರಿಕಿರಿ.
ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಟ್ಟಡ, ತರಗತಿ ಕೊಠಡಿ ಮತ್ತಿತರ ಸಮಸ್ಯೆಗಳು ತೀರಾ ಕಡಿಮೆ. ಆದರೂ ಅಲ್ಲೊಂದು ಇಲ್ಲೊಂದು, ಆಗೊಮ್ಮೆ ಈಗೊಮ್ಮೆ ಸಣ್ಣಪುಟ್ಟ ತೊಂದರೆಗಳು ಆಗುವುದುಂಟು. ಅಂಥದ್ದರಲ್ಲಿ ಒಂದು, ಈ ಶಾಲೆ.
ಈ ಶಾಲೆ ಉತ್ತಮ ವಾತಾವಣರದಲ್ಲಿದೆ, ಸೌಲಭ್ಯಗಳೂ ಚೆನ್ನಾಗಿವೆ. ಆದರೆ ವಾಹನಗಳು ಇಲ್ಲೇ ನಿಲ್ಲುವುದರಿಂದ ಒಂದು ರೀತಿಯ ಕಿರಿಕಿರಿ. ಆವರಣ ಗೋಡೆಯೊಂದು ಆದರೆ ಇದು ತಪ್ಪುತ್ತದೆ, ಮಕ್ಕಳು ಕೂಡ ಸುರಕ್ಷಿತರಾಗಿರುತ್ತಾರೆ ಎನ್ನುತ್ತಾರೆ ಶಾಲೆಯ ಸಮೀಪದಲ್ಲೇ ವಾಸವಿರುವ ವಿದ್ಯಾರ್ಥಿಯೊಬ್ಬಳ ಪಾಲಕರು.
ಶಾಲಾ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳ ಅಭಿವೃದ್ಧಿ, ತರಗತಿ ಕೊಠಡಿ ದುರಸ್ತಿ ಮುಂತಾದ ಕೆಲಸಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಧಾರಾಳ ಅನುದಾನ ಸಿಗುತ್ತಿದೆ. ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯಿಂದಲೂ ಶಾಲೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೂ ಕೆಲವೊಂದು ಸಮಸ್ಯೆಗಳು ಉಳಿದುಕೊಳ್ಳುತ್ತವೆ. ಹಳೆಯ ಮತ್ತು ಪಾರಂಪರಿಕ ಶೈಲಿಯ ಕಟ್ಟಡಗಳನ್ನು ನವೀಕರಿಸುವುದು ಕಷ್ಟವಾಗುತ್ತಿದೆ.
ಜಿಲ್ಲೆಯಲ್ಲಿ 521 ಹೈಸ್ಕೂಲ್ ಸೇರಿದಂತೆ ಒಟ್ಟು 1777 ಶಾಲೆಗಳು ಇವೆ. ಇವುಗಳ ಪೈಕಿ ಒಟ್ಟಾರೆ 312 ಕೊಠಡಿಗಳ ದುರಸ್ತಿ ಆಗಬೇಕು. 2024– 25ರಲ್ಲಿ ಕಲೆ ಹಾಕಿರುವ ಈ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದ್ದು 290 ಕೊಠಡಿಗಳ ದುರಸ್ತಿಗೆ ಅಂದಾಜು ವೆಚ್ಚದ ಪಟ್ಟಿ ಸಿದ್ಧಗೊಂಡಿದೆ ಎಂಬುದು ಇಲಾಖೆಯ ಮೂಲಗಳ ಮಾಹಿತಿ. ಕಳೆದ ಸುಮಾರು ವರ್ಷ ₹6.98 ಕೋಟಿ ಬಿಡುಗಡೆ ಆಗಿರುವುದರಿಂದ ಹಣಕಾಸಿನ ಸಮಸ್ಯೆ ಇಲ್ಲ.
ಮಳೆಗಾಲದಲ್ಲಿ ಅನಾಹುತಗಳು ಆಗುವ ಸಂಭವ ಹೆಚ್ಚು ಇರುವುದರಿಂದ ಜಿಲ್ಲೆಯ ಶಾಲೆಗಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ದುರಸ್ತಿಗಾಗಿ ಹೊಸ ಶಾಲೆಗಳ ಪಟ್ಟಿ ಸಿದ್ಧವಾಗುತ್ತಿರುತ್ತದೆ.
2022-23ರ ಅವಧಿಯಲ್ಲಿ ಜಿಲ್ಲೆಯಲ್ಲಿ 288 ತರಗತಿ ಕೊಠಡಿಗಳ ನಿರ್ಮಾಣ ಮಾಡುವ ಅಗತ್ಯವಿತ್ತು. ಆ ಪೈಕಿ ಈಗಾಗಲೇ 284 ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ. ವಿವಿಧ ಸಮಸ್ಯೆಗಳಿಂದಾಗಿ 4 ಉಳಿದುಕೊಂಡಿವೆ. ಸುಳ್ಯದಲ್ಲಿ 7, ಮಂಗಳೂರು ದಕ್ಷಿಣ ಹಾಗೂ ಉತ್ತರದಲ್ಲಿ ತಲಾ 5 ಶಾಲೆಗಳ ದುರಸ್ತಿ ಆಗಬೇಕಾಗಿದೆ. ಇದಕ್ಕೆ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ಹಣ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ ಇಲಾಖೆ.
ಈ ವರ್ಷವೂ ಇದೆ ಅಭಿವೃದ್ಧಿ
ಈ ಶೈಕ್ಷಣಿಕ ವರ್ಷದಲ್ಲೂ ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ ಹಣ ಮಂಜೂರಾಗಿದೆ. ಈ ವರ್ಷ ಒಟ್ಟು 41 ಶಾಲೆಗಳಲ್ಲಿ 64 ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದಕ್ಕೆ ಅನುಮೋದನೆ ಲಭಿಸಿದ್ದು ಇನ್ನೂ ಬೇಕು ಎಂದಾದರೆ ಸೇರಿಸಲು ಅವಕಾಶವಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು. ಈ ನಡುವೆ ಮುಖ್ಯಮಂತ್ರಿಗಳ ನಿಧಿಯಿಂದ ವಿಶೇಷ ಅನುದಾನವೂ ಲಭಿಸಲಿದ್ದು ಪಟ್ಟಿಯನ್ನು ಬೆಂಗಳೂರಿಗೂ ಕಳುಹಿಸಲಾಗಿದೆ ಎಂದು ತಿಳಿಸಿದರು.
ಶಾಲೆ ಕಟ್ಟಡಗಳ ಬಗ್ಗೆ ಮುತುವರ್ಜಿ
ಶಾಲೆಯ ಕಟ್ಟಡ ಸುಭದ್ರವಾಗಿರಬೇಕು ಎಂಬುದು ಶಾಲಾ ಶಿಕ್ಷಣ ಇಲಾಖೆಯ ಉದ್ದೇಶ. ಮಳೆ ಹೆಚ್ಚು ಬೀಳುವ ಪ್ರದೇಶದಲ್ಲಂತೂ ಕಟ್ಟಡಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಶಿಥಿಲ ಕಟ್ಟಡಗಳನ್ನು ಬಳಸುವ ಪ್ರಶ್ನೆಯೇ ಇಲ್ಲ ಅಭಿವೃದ್ಧಿ ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ಇಲಾಖೆಯ ಉಪನಿರ್ದೇಶಕ ಶಶಿಧರ ಜಿ.ಎನ್. ತಿಳಿಸಿದರು. ಕಟ್ಟಡಗಳು ಶಿಥಿಲಗೊಂಡಿರುವುದು ಕಂಡುಬಂದರೆ ತಕ್ಷಣ ದುರಸ್ತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಪಾರಂಪರಿಕ ಶೈಲಿಯ ಕಟ್ಟಡಗಳಾಗಿದ್ದರೆ ಸ್ವಲ್ಪ ಯೋಚಿಸಬೇಕಾಗುತ್ತದೆ. ಕಟ್ಟಡ ಗಟ್ಟಿಮುಟ್ಟಾಗಿದ್ದರೂ ಮಂಗಳೂರು ಹೆಂಚುಗಳಿದ್ದರೆ ಅವುಗಳನ್ನು ತೆಗೆದು ಆರ್‌ಸಿಸಿ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಸಿಎಸ್‌ಆರ್ ನಿಧಿಗೂ ಸಮಸ್ಯೆ ಇಲ್ಲ. ಕೆಲವು ಶಾಲೆಗಳ ಅಭಿವೃದ್ಧಿ ಸಮಿತಿಯವರೇ ದೊಡ್ಡ ಕಂಪನಿಗಳನ್ನು ಸಂಪರ್ಕಿಸಿ ಕಟ್ಟಡಗಳನ್ನು ದುರಸ್ತಿ ಮಾಡಿಸಿಕೊಳ್ಳುವುದು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.