ADVERTISEMENT

ದಕ್ಷಿಣ ಕನ್ನಡ | ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಪೂರೈಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:28 IST
Last Updated 21 ಆಗಸ್ಟ್ 2025, 7:28 IST
<div class="paragraphs"><p>ಚಿತ್ರ ಕೃಪೆ:&nbsp;</p></div>

ಚಿತ್ರ ಕೃಪೆ: 

   

ಮಂಗಳೂರು: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿ.ಜೆ (ಡಿಸ್ಕ್‌ ಜಾಕಿ) ನಿಷೇಧಿಸುವ ನೆಪದಲ್ಲಿ ಧ್ವನಿವರ್ಧಕ ಬಳಕೆಗೂ ಅಡ್ಡಿಪಡಿಸಲಾಗುತ್ತಿದೆ. ಮೊಸರುಕುಡಿಕೆ ಮತ್ತಿತರ ಕಾರ್ಯಕ್ರಮಗಳಿಗೆ ಬಳಸಿದ ಧ್ವನಿವರ್ಧಕವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇದು ಮುಂದುವರಿದರೆ, ಇದೇ 21ರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸುವುದನ್ನು ನಿಲ್ಲಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ, ‘ಡಿ.ಜೆ. ಎಂಬ ಪದವನ್ನೇ ಪೊಲೀಸರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸಂಗೀತವನ್ನು ಪ್ಲೇ ಮಾಡುವ ವ್ಯಕ್ತಿಗೆ ಡಿಸ್ಕ್ ಜಾಕಿ ಎನ್ನಲಾಗುತ್ತದೆ. ಅದಕ್ಕೆ ಬೇರೆ ಬೇರೆ ಸ್ತರದ ಧ್ವನಿವರ್ಧಕಗಳನ್ನು ಬಳಸಲಾಗುತ್ತದೆ. ಡಿ.ಜೆ. ನಿರ್ಬಂಧದ ನೆಪದಲ್ಲಿ ಧ್ವನಿವರ್ಧಕಗಳನ್ನೇ ಪೊಲೀಸರು ವಶಪಡಿಸಿಕೊಲ್ಳುವುದು ಸರಿಯೇ. ಇದರಿಂದ ನಮಗೆ, ಕಾರ್ಯಕ್ರಮ ಆಯೋಜಕರಿಗೆ ಮತ್ತು ಕಲಾವಿದರಿಗೆ  ತೊಂದರೆಯುಂಟಾಗಿದೆ. ನಾವು ಕೆಲಸ ನಿರ್ವಹಿಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಸಾರ್ವಜನಿಕ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆ 55 ಡೆಸಿಬಲ್‌ ಮಿತಿಯ ಒಳಗಿಸಬೇಕು ಎಂಬ ನಿರ್ಬಂಧವಿದೆ. ನಮ್ಮ ಪಂಪ್‌ವೆಲ್‌ ವೃತ್ತದಲ್ಲಿ ವಾಹನಗಳ ಧ್ವನಿಯೂ 100 ಡೆಸಿಬಲ್‌ವರೆಗೆ ಇರುತ್ತದೆ. ಸಾವಿರಾರು ಜನ ಸೇರುವ ಕಾರ್ಯಕ್ರಮಗಳಲ್ಲಿ ಕನಿಷ್ಠಪಕ್ಷ ಕೊನೆಯ ಸಾಲಿನಲ್ಲಿ ಕುಳಿತವರಿಗೆ ಕೇಳಿಸುವಷ್ಟು ಡೆಸಿಬಲ್‌ ಧ್ವನಿ ಕೇಳಿಸಬೇಕಲ್ಲವೇ. ಕಾರ್ಯಕ್ರಮದ ಸ್ಥಳ ಹಾಗೂ ಅಲ್ಲಿ ಸೇರುವ ಜನರ ಸಂಖ್ಯೆಯ ಆಧಾರದಲ್ಲಿ ಅವಶ್ಯಕತೆಗೆ ತಕ್ಕಂತೆ ಧ್ವನಿವರ್ಧಕ ಬಳಸುವುದಕ್ಕೆ ಅನುವು ಮಾಡಿಕೊಡಬೇಕು’ ಎಂದು ಕೋರಿದರು.

‘ನಮ್ಮ ಸಂಘದಲ್ಲಿ 1300 ಕ್ಕಿಂತಲೂ ಅಧಿಕ ಸದಸ್ಯರಿದ್ದಾರೆ. 6000 ಕ್ಕೂ ಅಧಿಕ ಕಾರ್ಮಿಕರು ಇದೇ ಕೆಲಸವನ್ನು ನೆಚ್ಚಿಕೊಂಡಿದ್ದಾರೆ.  ಈಗ ಧ್ವನಿವರ್ಧಕ ಬಳಕೆಗೆ  ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಅವರ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ. ನಾವೂ ಈ ಪರಿಕರ ಖರೀದಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದೇವೆ. ಈಗ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ.ಈ ಬಿಕ್ಕಟ್ಟನ್ನು ಸರ್ಕಾರ ಬಗೆಹರಿಸುವ ವಿಶ್ವಾಸವಿದೆ’ ಎಂದರು.

ಸಂಘಟನೆಯ ಗೌರವಾಧ್ಯಕ್ಷ ರಾಜಶೇಖರ ಶೆಟ್ಟಿ ಕೆ, ‘ಈ ನಿರ್ಬಂಧವು ಡಿ.ಜೆ. ಮಾತ್ರವಲ್ಲ, ನಾಟಕ, ರಸಮಂಜರಿ ಮತ್ತಿತರ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಅಶೋಕ್ ಕುಮಾರ್ ಬಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಬೋಳಾರ್ ಎಲ್.ಎಂ, ಸುದರ್ಶನ್‌, ನಿಶಿತ್ ಪೂಜಾರಿ, ದೇವರಾಜ್ ಮೊದಲಾದವರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.