ADVERTISEMENT

ಫಲಿತಾಂಶ ಹೆಚ್ಚಳಕ್ಕೆ ‘ಮಾದರಿ ಪತ್ರಿಕೆ’

ದ.ಕ. ಜಿಲ್ಲೆಯಲ್ಲಿ ಪ್ರಶ್ನೆ ಗುಚ್ಛ, ರಸಪ್ರಶ್ನೆ ಪ್ರಯೋಗ

ಸಂಧ್ಯಾ ಹೆಗಡೆ
Published 7 ಜುಲೈ 2021, 7:13 IST
Last Updated 7 ಜುಲೈ 2021, 7:13 IST
ಸುಳ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪರೀಕ್ಷಾ ಕೇಂದ್ರದ ಸಿದ್ಧತೆ ಪರಿಶೀಲಿಸಿದರು.
ಸುಳ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪರೀಕ್ಷಾ ಕೇಂದ್ರದ ಸಿದ್ಧತೆ ಪರಿಶೀಲಿಸಿದರು.   

ಮಂಗಳೂರು: ಇದೇ ತಿಂಗಳ ಮೂರನೇ ವಾರದಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರಶ್ನೆಗಳ ಗುಚ್ಛ, ರಸಪ್ರಶ್ನೆ ಸ್ಪರ್ಧೆಗಳನ್ನು ಸಿದ್ಧಪಡಿಸಿರುವ ಇಲಾಖೆ, ಇನ್ನೊಂದು ಪ್ರಯೋಗವಾಗಿ ‘ಮಾದರಿ ಪ್ರಶ್ನೆಪತ್ರಿಕೆ’ ರೂಪಿಸಿದೆ.

ಪ್ರಥಮ ಪ್ರಯೋಗವಾಗಿ ಗಣಿತ ವಿಷಯದ ಮೂರು ಪ್ರಶ್ನೆ ಪತ್ರಿಕೆಗಳು ಸಿದ್ಧವಾಗಿವೆ. ಪಾಸಿಂಗ್ ಪ್ಯಾಕೇಜ್ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಈ ಮೂರು ಮಾದರಿ ಪತ್ರಿಕೆಗಳಲ್ಲಿರುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಂಡರೆ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗಬಹುದು. ಇದರಿಂದ ವಿದ್ಯಾರ್ಥಿಗೆ ಉತ್ತಮ ಭವಿಷ್ಯ ಜತೆಗೆ, ಶಾಲೆ ಹಾಗೂ ಜಿಲ್ಲೆಯ ಒಟ್ಟಾರೆ ಫಲಿತಾಂಶ ಹೆಚ್ಚಳವಾಗಲು ಸಾಧ್ಯ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಇದೇ ಮಾದರಿಯಲ್ಲಿ ವಿಜ್ಞಾನ ಹಾಗೂ ಉಳಿದ ವಿಷಯಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಯೋಜನೆಯಿದೆ. ಈಗಾಗಲೇ ಜಿಲ್ಲೆಯಲ್ಲಿ ರೂಪಿಸಿರುವ ವಿಷಯವಾರು ಪ್ರಶ್ನೆಗಳ ಗುಚ್ಛ (ಕ್ವೆಶ್ಚನ್ ಬ್ಯಾಂಕ್) ಮಕ್ಕಳ ಕೈ ಸೇರಿದೆ. ಪ್ರತಿ ವಿಷಯದಲ್ಲಿ ಸರಾಸರಿ 500 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇದು ಕಠಿಣವಾಗುವ ಕಾರಣಕ್ಕೆ ಮಾದರಿ ಪ್ರಶ್ನೆಪತ್ರಿಕೆ ರಚಿಸಲಾಗಿದೆ. ಶಿಕ್ಷಕರು ವಾಟ್ಸ್‌ಆ್ಯಪ್, ಗೂಗಲ್ ಮೀಟ್, ವೆಬಿನಾರ್ ಮೂಲಕ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.

ADVERTISEMENT

‘ಮೊಬೈಲ್ ಇರುವ ಮಕ್ಕಳ ಜೊತೆ ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದಾರೆ. ಮೊಬೈಲ್ ಇಲ್ಲದ ಮಕ್ಕಳಿಗೆ, ಶಾಲೆಗೆ ಆಹಾರ ಸಾಮಗ್ರಿ ಸಂಗ್ರಹಿಸಲು ಬರುವ ಪಾಲಕರ ಮೂಲಕ ಪ್ರಶ್ನೆಗಳ ಗುಚ್ಛವನ್ನು ಕಳುಹಿಸಿಕೊಡಲಾಗಿದೆ. ಪಾಲಕರ ಮೂಲಕವೂ ಸಂಪರ್ಕ ಸಾಧ್ಯವಾಗದಿದ್ದರೆ, ಶಿಕ್ಷಕರೇ ಮಕ್ಕಳ ಮನೆಗೆ ಹೋಗಿ ಪ್ರಶ್ನೆಗಳ ಗುಚ್ಛ ತಲುಪಿಸಿ ಬರುತ್ತಿದ್ದಾರೆ’ ಎಂದು ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದರು.

ಕೇರಳದ ಗಡಿಭಾಗದಿಂದ ಪರೀಕ್ಷೆ ಬರೆಯಲು ಬರುವ 441 ಮಕ್ಕಳನ್ನು ಗುರುತಿಸಲಾಗಿದೆ. ಅವರಲ್ಲಿ 125 ಮಕ್ಕಳು ತಲಪಾಡಿ ಚೆಕ್‌ಪೋಸ್ಟ್ ದಾಟಿ ಬರುವವರಾಗಿದ್ದಾರೆ. ಗಡಿಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ. ಪರೀಕ್ಷಾ ಪ್ರವೇಶಪತ್ರ ತೋರಿಸಿ ಅವರು, ಪರೀಕ್ಷಾ ಕೇಂದ್ರಕ್ಕೆ ಬರಬಹುದು. ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ನಿಗಾವಹಿಸಲಿದ್ದಾರೆ. ಒಂದೊಮ್ಮೆ ಮಕ್ಕಳಿಗೆ ಸಾರಿಗೆ ಸಮಸ್ಯೆ ಆದರೆ ಪರ್ಯಾಯ ವ್ಯವಸ್ಥೆಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಶಮಂತ್ ತಿಳಿಸಿದರು.

‘ಶಾಲೆಯಲ್ಲೇ ಹೇಳಿ ಕೊಡಲಿ’

‘ಸೌಲಭ್ಯಗಳಿರುವ ಮಕ್ಕಳು ಶಿಕ್ಷಕರು, ಮೊಬೈಲ್, ಯೂಟ್ಯೂಬ್ ಮೂಲಕ ಒಎಂಆರ್ ಶೀಟ್ ತುಂಬುವ ಕ್ರಮವನ್ನು ಕಲಿಯಬಹುದು. ಆದರೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿದಾಗ ಮಾತ್ರ ಅರ್ಥವಾಗುತ್ತದೆ. ಒಎಂಆರ್ ಶೀಟ್ ತುಂಬುವಲ್ಲಿ ವ್ಯತ್ಯಾಸವಾದರೆ, ಅಂಕ ಕೈತಪ್ಪಿ ಹೋಗುತ್ತದೆ. ಮಕ್ಕಳಿಗೆ ಈ ಬಗ್ಗೆ ಹೇಗೆ ತಿಳಿವಳಿಕೆ ನೀಡುವುದು ಎನ್ನುವುದೇ ಗೊಂದಲವಾಗಿದೆ’ ಎಂದು ನಗರದ ಪ್ರೌಢಶಾಲೆಯ ಮುಖ್ಯಶಿಕ್ಷಕರೊಬ್ಬರು ಬೇಸರಿಸಿಕೊಂಡರು.

‘ಕೋವಿಡ್ ನಿಯಮ ಪಾಲನೆಯೊಂದಿಗೆ ಒಂದೆರಡು ದಿನದ ಮಟ್ಟಿಗಾದರೂ ಮಕ್ಕಳನ್ನು ಶಾಲೆಗೆ ಕರೆಯಿಸಿ, ಒಎಂಆರ್ ಶೀಟ್ ಭರ್ತಿ ಮಾಡುವುದನ್ನು ಕಲಿಸಬೇಕು’ ಎಂದು ಪಾಲಕರೊಬ್ಬರು ವಿನಂತಿಸಿದರು.

‘ಮಕ್ಕಳನ್ನು ತಲುಪುವುದೇ ಸವಾಲು’

‘ಕೂಲಿ ಕೆಲಸಕ್ಕಾಗಿ ವಲಸೆ ಬಂದಿದ್ದ ಹೊರಜಿಲ್ಲೆಯ ಕಾರ್ಮಿಕರ ಮಕ್ಕಳು, ಲಾಕ್‌ಡೌನ್ ವೇಳೆ ಊರು ಸೇರಿದ್ದಾರೆ. ಈ ಮಕ್ಕಳನ್ನು ತಲುಪುವುದೇ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಅಂದಾಜು 2,000 ಇಂತಹ ಮಕ್ಕಳಿದ್ದಾರೆ. ಇವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಶಾಲೆಯ ಒಟ್ಟು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ’ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.