ಮಂಗಳೂರು: ಮೂತ್ರಪಿಂಡ ಸಮಸ್ಯೆ ಮತ್ತು ಆಸ್ತಮಾದಿಂದ ಬಳಲುತ್ತಿದ್ದ 83 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಅವರು ಕೊರೊನಾ ಸೋಂಕು ಹೊಂದಿರುವುದು ಸೋಮವಾರ ದೃಢಪಟ್ಟಿದೆ.
‘ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಯೊಬ್ಬರು ಮೂತ್ರಪಿಂಡ ಸಮಸ್ಯೆಯ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಈಚೆಗೆ ದಾಖಲಾಗಿದ್ದರು. ಅವರಿಗೆ ಆಸ್ತಮಾ ಕೂಡಾ ಇತ್ತು. ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರು ಮೂಲತಃ ಪುತ್ತೂರಿನವರು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೋನಾ ಸೊಂಕು ಹೊಂದಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಂತಾಗಿದೆ. ಕೊರೊನಾ ಸೊಂಕು ಹೊಂದಿದ್ದ 40 ವರ್ಷದ ಕಾರ್ಮಿಕರೊಬ್ಬರು ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟ 62 ಮಂದಿಯಲ್ಲಿ ಐವರಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.