
ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ‘ಶೇಷವಸ್ತ್ರ’ ಪ್ರಸಾದವನ್ನು ಸೋಮವಾರ ಸ್ವೀಕರಿಸಿದ ಮಹಿಳೆಯರು ಧನ್ಯರಾದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತರಿಗೆ ಮಂಗಳವಾರ ಶೇಷವಸ್ತ್ರ ಪ್ರಸಾದ ವಿತರಣೆ ನಡೆಯಲಿದೆ.
ಹರಕೆಯ ರೂಪದಲ್ಲಿ ಭಕ್ತರು ದೇವಿಗೆ ಅರ್ಪಿಸುವ ಸೀರೆಗಳನ್ನು ದಸರೆಯ ಐದನೇ ದಿನವಾದ ಲಲಿತಾ ಪಂಚಮಿಯಂದು ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಬಾರಿ ಲಲಿತಾ ಪಂಚಮಿ ದಸರೆಯ ಆರನೇ ದಿನ ಬಂದಿದೆ. ಪೊಳಲಿ ದೇವಸ್ಥಾನದಲ್ಲಿ ಐದನೇ ದಿನವಾದ ಸೋಮವಾರವೇ ಈ ಕಾರ್ಯಕ್ರಮ ನಡೆದಿದೆ. ಕಟೀಲು ದೇವಸ್ಥಾನದಲ್ಲಿ ಆರನೇ ದಿನ ನಡೆಯಲಿದೆ.
‘ಸಂಜೆ ಆರು ಗಂಟೆಗೆ ಶೇಷವಸ್ತ್ರ ವಿತರಣೆ ಕಾರ್ಯಕ್ರಮ ಆರಂಭವಾಗಲಿದೆ. ಅನ್ನ ಪ್ರಸಾದ ಸ್ವೀಕರಿಸಲು ಸರದಿಯಲ್ಲಿ ನಿಲ್ಲುವ ಮಹಿಳೆಯರಿಗೆ ಸೀರೆ ವಿತರಿಸಲಾಗುತ್ತದೆ. ರಾತ್ರಿ 11 ಗಂಟೆಯ ವರೆಗೂ ಕಾರ್ಯಕ್ರಮ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಕಟೀಲು ದೇವಸ್ಥಾನದ ವಕ್ತಾರ ವಿಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಿಂದೆಲ್ಲ ಸೀರೆಯನ್ನು ಎರಡು ಭಾಗ ಮಾಡಿ ರವಿಕೆ ಕಣ ಎಂದು ಹಂಚಲಾಗುತ್ತಿತ್ತು. ಅದನ್ನು ಕಪಾಟಿನಲ್ಲಿಟ್ಟು ಮಹಿಳೆಯರು ಪೂಜಿಸುತ್ತಿದ್ದರು. ಈಚೆಗೆ ಪೂರ್ತಿ ಸೀರೆಯನ್ನು ಕೊಡಲಾಗುತ್ತದೆ. ದೇವಿಗೆ ಅರ್ಪಿಸುವ ಸೀರೆಗಳ ಪೈಕಿ ಕೆಲವನ್ನು ಅನ್ನದಾನ, ಚಂಡಿಕಾ ಹೋಮ ಮತ್ತು ರಂಗಪೂಜೆಯ ಹರಕೆ ಅರ್ಪಿಸಿದವರಿಗೆ ನೀಡಲಾಗುತ್ತದೆ. ಉಳಿದ ಸೀರೆಗಳನ್ನು ಲಲಿತ ಪಂಚಮಿಯ ದಿನ ಹಂಚಲಾಗುತ್ತದೆ. ಪ್ರಸಾದ ಸ್ವೀಕರಿಸಲು ಸಾಮಾನ್ಯವಾಗಿ ಸಂಜೆ ನಾಲ್ಕು ಗಂಟೆಯಿಂದಲೇ ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ನಿಂತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರ್ಯಕರ್ತರು ತಿಳಿಸಿದರು.
ದಸರೆಯ ಐದನೇ ದಿನವಾದ ಸೋಮವಾರವೂ ದೇವಿ ದೇವಸ್ಥಾನಗಳಲ್ಲಿ ಸಂಭ್ರಮ ನೆಲೆಯಾಗಿತ್ತು. ಬೆಳಿಗ್ಗೆಯಿಂದ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡ ಭಕ್ತರು ಅನ್ನಪ್ರಸಾದ ಸ್ವೀಕರಿಸಿ ವಾಪಸಾದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯೂ ಇತ್ತು. ಜಿಲ್ಲೆಯ ಪ್ರಮುಖ ದೇವಿ ದೇವಸ್ಥಾನವಾದ ಪೊಳಲಿಯ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಎಂದಿನಂತೆ ಸೋಮವಾರವೂ ಚಂಡಿಕಾ ಹೋಮ ನಡೆಯಿತು. ಮಂಗಳೂರಿನ ‘ನೃತ್ಯಸುಧಾ’ದಿಂದ ಸಂಜೆ ‘ನೃತ್ಯಾರ್ಪಣಂ’ ನಡೆಯಿತು. ನಂತರ ತೋನ್ಸೆ ಪುಷ್ಕಳ್ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ ನಡೆಯಿತು.
ಮಂಗಳಾದೇವಿ ದೇವಸ್ಥಾನದಲ್ಲಿ ಸಂಜೆ ಭಜನೆ, ಸೌಂದರ್ಯ ಲಹರಿಯ ಆಯ್ದ ಶ್ಲೋಕಗಳ ವಾಚನ–ವ್ಯಾಖ್ಯಾನ, ಹೊಸೆಬಟ್ಟು ಸಂಸ್ಕೃತಿ ಕಲಾಸಂಗಮ ಮತ್ತು ಉಳ್ಳಾಲದ ನಾಟ್ಯಾಲಯದಿಂದ ನೃತ್ಯ ವೈವಿಧ್ಯ ನೆರವೇರಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಜೆ ಕಲಾ ನಿಕೇತನದಿಂದ ನೃತ್ಯ ಸಿಂಚನ, ಯುವಕ ಸಂಘದಿಂದ ಸಾಂಸ್ಕೃತಿಕ ವೈಭವ, ರಾತ್ರಿ ಕಥಕ್ ನೃತ್ಯ ಮತ್ತು ವೀಣಾ ವೈಭವ ನಡೆಯಿತು. ಉರ್ವದ ಬೋಳೂರು ಮಾರಿಯಮ್ಮ ದೇವಸ್ಥಾನ, ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದಲ್ಲೂ ಕಾರ್ಯಕ್ರಮ ವೈವಿಧ್ಯವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.