ADVERTISEMENT

ದೀಪಾವಳಿ: ತುಳುವರ ಪರ್ಬ

ಬಲೀಂದ್ರ ಭೂಮಿಗೆ ಬರುವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 14:54 IST
Last Updated 12 ನವೆಂಬರ್ 2020, 14:54 IST
ತುಳುವರ ಬಲೀಂದ್ರ –ಚಿತ್ರ: ಭರತೇಶ ಅಲಸಂಡೆಮಜಲು
ತುಳುವರ ಬಲೀಂದ್ರ –ಚಿತ್ರ: ಭರತೇಶ ಅಲಸಂಡೆಮಜಲು   

ಮಂಗಳೂರು: ಕತ್ತಲೆಯನ್ನು ಅಳಿಸಿ ಬೆಳಕನ್ನು ತರುವ ‘ದೀಪಾವಳಿ’ಯ ಮೂರು ದಿನಗಳ ಸಂಭ್ರಮವನ್ನು ತುಳುನಾಡಿನ ಜನತೆ ಕರೆಯುವುದೇ ‘ಪರ್ಬ’ (ಹಬ್ಬ) ಎಂದು. ನೆಲದ ಸಂಸ್ಕೃತಿ, ವೃತ್ತಿ, ಆಹಾರ, ಪ್ರವೃತ್ತಿಗಳ ಆರಾಧನೆ. ಇವುಗಳಿಗೆ ದೀಪ–ಪಟಾಕಿಯ ಮೆರುಗು.

ಮೂರು ದಿನಗಳ ಪೈಕಿ ಮೊದಲ ದಿನ ನರಕ ಚತುರ್ದಶಿ. ಅದು ‘ಸ್ನಾನದ ಹಬ್ಬ’. ಎರಡನೇ ದಿನ ಅಮಾವಾಸ್ಯೆ. ಅಂದು ‘ಲಕ್ಷ್ಮೀ ಪೂಜೆ’ ಹಾಗೂ ಮೂರನೇ ದಿನ ಪಾಡ್ಯ. ಅದು ‘ಬಲಿಪಾಡ್ಯಮಿ’.

ಮೊದಲ ದಿನದ ಸ್ನಾನದ ಹಬ್ಬಕ್ಕೆ ಹಿಂದಿನ ದಿನವೇ ಸಿದ್ಧತೆಗಳು ನಡೆಯುತ್ತವೆ. ಬಚ್ಚಲಮನೆಯಲ್ಲಿನ ಸ್ನಾನದ ಹಂಡೆಯನ್ನು ಸ್ವಚ್ಛಗೊಳಿಸಿ, ಜೇಡಿಯ ರಂಗೋಲಿ ಬರೆದು, ಮುಳ್ಳು ಸೌತೆ ಬಳ್ಳಿ ಹಾಗೂ ಹೂವುಗಳಿಂದ ಸಿಂಗರಿಸಲಾಗುತ್ತದೆ. ಬಳಿಕ ಅದಕ್ಕೆ ನೀರು ತುಂಬಿ, ಕಾಯಿಸುತ್ತಾರೆ.

ADVERTISEMENT

ಮರುದಿನ ಬೆಳಿಗ್ಗೆ ಮನೆ ಮಂದಿಯೆಲ್ಲ ಎಣ್ಣೆ ಹಚ್ಚಿ, ವ್ಯಾಯಾಮ ಮಾಡಿ ಸ್ನಾನ ಮಾಡುತ್ತಾರೆ. ಅಜ್ಜಿ, ಅಮ್ಮ ಅಥವಾ ಮನೆಯ ಹಿರಿಯರು ಸ್ನಾನ ಮಾಡಿಸುವುದು ಸಂಪ್ರದಾಯ. ಬಿಸಿನೀರಿನ ಅಭ್ಯಂಜನ ಮುಗಿಸಿ ಬಂದೊಡನೆ, ಪದೆಂಜಿ ನೀರ್ (ಹೆಸರಿನ ಕಷಾಯ) ಕುಡಿದು ತಂಪಾಗುತ್ತಾರೆ. ಬಳಿಕ ಬೆಲ್ಲ ಹಾಗೂ ಅವಲಕ್ಕಿಯ (ಬಜಿಲ್) ತಿನಿಸು, ಬೆಳಗ್ಗಿನ ಭರ್ಜರಿ ಉಪಹಾರ.

ಎರಡನೇ ದಿನ ಲಕ್ಷ್ಮೀ ಪೂಜೆ. ಆದರೆ, ತುಳುನಾಡಿನ ಬಹುತೇಕರು ಕೃಷಿಕ ಹಾಗೂ ಕುಶಲಕರ್ಮಿಗಳಾಗಿದ್ದು, ಇದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಅಂದು ಬಹುತೇಕ ವಿಶ್ರಾಂತಿಯಂತೆ ಇರುತ್ತಿತ್ತು. ಈಗೀಗ ಅಂಗಡಿ, ಉದ್ಯಮ, ವರ್ತಕರಲ್ಲಿ ಪೂಜೆಗಳು ಹೆಚ್ಚಿವೆ.

ಮೂರನೇ ದಿನ ಪಾಡ್ಯ. ಅಂದು ವಿಶೇಷವಾಗಿ ಬಲೀಂದ್ರ ಹಾಗೂ ಕೃಷಿಕರ ಒಡನಾಡಿಯಾದ ಗೋವನ್ನು ಪೂಜಿಸಲಾಗುತ್ತದೆ. ಹಟ್ಟಿಯಲ್ಲಿರುವ ದನ, ಕರು, ಎಮ್ಮೆ, ಕೋಣಗಳನ್ನು ಸ್ನಾನ ಮಾಡಿಸಿ, ಹೂ ಮಾಲೆಗಳನ್ನು ಹಾಕಿ ಅಲಂಕರಿಸುತ್ತಾರೆ. ಕೃಷಿ ಪರಿಕರಗಳನ್ನೂ ಜೋಡಿಸಿಡುತ್ತಾರೆ. ಬಳಿಕ ಅವುಗಳನ್ನು ಪೂಜಿಸುತ್ತಾರೆ.

ಅಂದು ಅಂಗಳ ಅಥವಾ ಗದ್ದೆ ಬದಿಯಲ್ಲಿ ಪಾಲೆ (ಹಾಲೆ) ಮರದ ಕಂಬವನ್ನು ನೆಡುತ್ತಾರೆ. ಕಂಬದ ತುದಿಯಲ್ಲಿ ಕವಲುಗಳು ಇದ್ದು, ಅದಕ್ಕೊಂದು ಕೋಲು ಕಟ್ಟಿ ಸಿಂಗರಿಸುತ್ತಾರೆ. ಬಳಿಕ ಮೇಲೊಂದು ತಿಪಿಲೆ (ಹಣತೆ) ಹಚ್ಚುತ್ತಾರೆ. ಅದನ್ನೇ ‘ಬಲೀಂದ್ರ ಮರ’ ಎನ್ನುತ್ತಾರೆ. ಕೆಲವೆಡೆ ಬಾಳೆಯ ದಿಂಡನ್ನು ಅಲಂಕಾರಿಕವಾಗಿ ಕತ್ತರಿಸಿ, ಸಾಂಪ್ರದಾಯಿಕ ರೀತಿಯಲ್ಲಿ ಬಲೀಂದ್ರ ರಚನೆ ಮಾಡುತ್ತಾರೆ. ಅದನ್ನು ಪೂಜಿಸುತ್ತಾರೆ.

ಕತ್ತಲೆಯಾಗುತ್ತಿದ್ದಂತೆಯೇ ಗೋಪೂಜೆ, ಬಲೀಂದ್ರ ಪೂಜೆ ಮಾಡುತ್ತಾರೆ. ಮನೆಯ ಸುತ್ತ, ಕೊಟ್ಟಿಗೆ, ಹಟ್ಟಿ ಎಲ್ಲೆಡೆ ಹಣತೆಗಳನ್ನು ಬೆಳಗಿಸುತ್ತಾರೆ. ಗೋವುಗಳಿಗೆ ಬೇಯಿಸಿದ ಭತ್ತ, ಅವಲಕ್ಕಿ, ತುರಿದ ತೆಂಗಿನಕಾಯಿ, ಬಾಳೆಹಣ್ಣು ಇತ್ಯಾದಿಗಳನ್ನು ನೀಡಿ ಪೂಜಿಸುತ್ತಾರೆ. ಜೊತೆಗೆ ಗೋವುಗಳಿಗೂ ನೀರ್ ದೋಸೆ, ಅಡ್ಯೆ ಇತ್ಯಾದಿಗಳನ್ನು ನೀಡುತ್ತಾರೆ.

ಆ ನಂತರ ಎಲ್ಲರೂ ಬಲೀಂದ್ರ ಮರದ ಬಳಿ ಬಂದು ಆರತಿ ಬೆಳಗಿ, ಪ್ರಾರ್ಥಿಸುತ್ತಾರೆ. ಪೂಜೆ ಬಳಿಕ ಎಲ್ಲರೂ ಸೇರಿ, ‘ಬಲೀಂದ್ರ ಬಲೀಂದ್ರ ಕೂ...ಕೂ...’ ಎಂದು ಕೂಗುತ್ತಾರೆ. ಇದು ಬಲೀಂದ್ರನನ್ನು ಭೂಮಿ ಸ್ವಾಗತಿಸುವುದು ಎಂದು ಹಿರಿಯರು ಹೇಳುತ್ತಾರೆ.

ಈ ಮೂರು ದಿನಗಳನ್ನು ಮೊದಲನೆ ದಿನ ಸತ್ತವರ ಹಬ್ಬ, ಎರಡನೇ ದಿನ ಇದ್ದವರ ಹಬ್ಬ ಮತ್ತು ಮೂರನೆ ದಿನ ಕೃಷಿಕರ ಒಡನಾಡಿಗಳ (ಗೋವು ಇತ್ಯಾದಿ) ಎಂದೂ ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.