ADVERTISEMENT

ಮೂಡುಬಿದಿರೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಸ್ಥಾಪನೆಗೆ ಹೆಚ್ಚಿದ ಬೇಡಿಕೆ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 19 ಜನವರಿ 2025, 6:55 IST
Last Updated 19 ಜನವರಿ 2025, 6:55 IST
ಮೂಡುಬಿದಿರೆಯ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕೆಎಸ್ಆರ್‌ಟಿಸಿ ಬಸ್
ಮೂಡುಬಿದಿರೆಯ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕೆಎಸ್ಆರ್‌ಟಿಸಿ ಬಸ್   

ಮೂಡುಬಿದಿರೆ: ದೂರದ ಊರುಗಳಿಂದ ಮೂಡುಬಿದಿರೆ ಮಾರ್ಗವಾಗಿ ಹಲವು ಕೆಎಸ್ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಇಲ್ಲಿನ ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಂತು ಬಸ್‌ಗೆ ಕಾಯಬೇಕಾದ ಸ್ಥಿತಿ ಇದೆ.

ಮಂಗಳೂರು– ಮೂಡುಬಿದಿರೆ ಮಾರ್ಗವಾಗಿ ನಾಲ್ಕು ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡ ನಂತರ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.

ಮೂಡುಬಿದಿರೆ ಮಾರ್ಗವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯ ಅಲ್ಲದೆ, ರಾಜ್ಯದ ವಿವಿಧ ಊರುಗಳಿಗೆ ನಿತ್ಯ ಸುಮಾರು 60 ಬಸ್‌ಗಳು ಸಂಚರಿಸುತ್ತವೆ. ಆದರೆ, ಸರಿಯಾದ ತಂಗುದಾಣ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಸಂಚಾರ ನಿಯಂತ್ರಣ ಕೇಂದ್ರವಿದ್ದರೂ ಬಸ್ ಹತ್ತಲು ದ್ವಿಪಥ ರಸ್ತೆ ದಾಟಿ ಬರಬೇಕಿದ್ದು, ಇದು ಪ್ರಯಾಣಿಕರಿಗೆ ಅಪಾಯಕಾರಿ ಪರಿಣಮಿಸಿದೆ. ಬೇಸಿಗೆಯಲ್ಲಿ ಬಿಸಿಲು, ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲ. ರಸ್ತೆ ಇಕ್ಕಟ್ಟಾಗಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ವೇಳೆ ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಜನ. ವಾಹನ ದಟ್ಟಣೆ ಉಂಟಾಗುತ್ತಿದೆ. ಈ ಸಂಸರ್ಭದಲ್ಲಿ ಬಸ್‌ಗಳನ್ನು ರಸ್ತೆ ಮಧ್ಯೆಯೇ ನಿಲ್ಲಿಸುವುದರಿಂದ ಮತ್ತಷ್ಟು ತೊಂದರೆ ಆಗುತ್ತಿದೆ.

ಮೂಡುಬಿದಿರೆಯಲ್ಲಿ ಕೆಎಸ್ಆರ್‌ಟಿಸಿ ಡಿಪೊ ಆರಂಭವಾಗದೆ ಇರುವುದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಸ್ವರಾಜ್ಯ ಮೈದಾನದ ಬಳಿ 8 ಎಕರೆ ಸರ್ಕಾರಿ ಜಾಗವಿದ್ದು, ಅಲ್ಲಿ ಕೆಎಸ್ಆರ್‌ಟಿಸಿ ಡಿಪೊಗೆ ಜಾಗ ಗುರುತಿಸುವಂತೆ ಭಾರತೀಯ ರೈತ ಸೇನೆಯ ಮೂಡುಬಿದಿರೆ ಘಟಕ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿವೆ. ಆದರೆ, ಕೆಎಸ್ಆರ್‌ಟಿಸಿ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಈ ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಹರಿಪ್ರಸಾದ್ ನಾಯಕ್ ಅವರು ಸಲ್ಲಿಸಿದ ಖಾಸಗಿ ದೂರು ವಿಚಾರಣೆ ನಡೆಯುತ್ತಿದೆ. ಮೂಡುಬಿದಿರೆ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಅವರೂ ಡಿಪೊ ಸ್ಥಾಪನೆ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಬೆಳೆಯುತ್ತಿರುವ ಮೂಡುಬಿದಿರೆಗೆ ಕೆಎಸ್ಆರ್‌ಟಿಸಿ ಡಿಪೊ ಅಗತ್ಯವಿದ್ದು, ಸ್ವರಾಜ್ಯ ಮೈದಾನದ ಬಳಿ ಇರುವ ಸರ್ಕಾರಿ ಜಾಗವನ್ನು ಕಾದಿರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು
ಹರಿಪ್ರಸಾದ್ ನಾಯಕ್, ಅಧ್ಯಕ್ಷ, ಭಾರತೀಯ ರೈತ ಸೇನೆ ಮೂಡುಬಿದಿರೆ
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಕೆಎಸ್ಆರ್‌ಟಿಸಿ ಡಿಪೊಗೆ ಕಂದಾಯ ಇಲಾಖೆ 3.50 ಎಕರೆ ಗುರುತಿಸಿದ್ದು, ನಮ್ಮ ನಿಗಮಕ್ಕೆ ಹಸ್ತಾಂತರಿಸಲು ಮನವಿ ಮಾಡಿದ್ದೇವೆ
ರಾಜೇಶ್ ಶೆಟ್ಟಿ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.