ADVERTISEMENT

ದಕ್ಷಿಣ ಕನ್ನಡ: ಅಂಕೆ ಮೀರಿ ಹರಡುತ್ತಿದೆ ಡೆಂಗಿ

​ಪ್ರಜಾವಾಣಿ ವಾರ್ತೆ
ಪ್ರವೀಣ್‌ ಕುಮಾರ್‌ ಪಿ.ವಿ
Published 15 ಜುಲೈ 2024, 7:13 IST
Last Updated 15 ಜುಲೈ 2024, 7:13 IST
ಬೋಳೂರು ಪ್ರದೇಶದಲ್ಲಿ ಮನೆಗಳ ಹತ್ತಿರ ಮಳೆ ನೀರು ನಿಂತಿರುವುದು
ಬೋಳೂರು ಪ್ರದೇಶದಲ್ಲಿ ಮನೆಗಳ ಹತ್ತಿರ ಮಳೆ ನೀರು ನಿಂತಿರುವುದು   

ಮಂಗಳೂರು: ನಗರವನ್ನು ಮೂರು ದಶಕಗಳ ಕಾಡಿದ್ದ ಮಲೇರಿಯಾ ಇನ್ನೇನು ಹತೋಟಿಗೆ ಬಂದು ಎಂದು ನಿಟ್ಟುಸಿರು ಬಿಡುವಾಗಲೇ ‘ಡೆಂಗಿ’ ಹಾವಳಿ ದಾಂಗುಡಿ ಇಟ್ಟಿದೆ. ಅನಾಫಿಲಿಸ್‌ ಹೆಣ್ಣು ಸೊಳ್ಳೆಗಳ ಮೂಲಕ ಹರಡುವ ಮಲೇರಿಯಾ ಪ್ರಕರಣಗಳನ್ನು ಸಾವಿರಗಳ ಸಂಖ್ಯೆಯಿಂದ ಎರಡಂಕಿಗೆ ಇಳಿಸಿದ್ದೇವೆ ಎಂದು ಬೆನ್ನು ತಟ್ಟಿಸಿಕೊಂಡ ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿಗಳ ಪಾಲಿಗೆ ಈಡಿಸ್ ಸೊಳ್ಳೆಗಳ ಮೂಲಕ ಹರಡುವ ‘ಡೆಂಗಿ’ ಸವಾಲಾಗಿ ಕಾಡುತ್ತಿದೆ.

ಐದು ವರ್ಷಗಳಿಂದ ಈಚೆಗೆ ವರ್ಷದಿಂದ ವರ್ಷಕ್ಕೆ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ವರ್ಷವೂ ಮಳೆಗಾಲದ ಶುರುವಾದ ಬಳಿಕ  ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಜ್ವರದಿಂದ ಬಳಲುತ್ತಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ವಾರಗಟ್ಟಲೆ ಕಾಡುವ ಈ ಜ್ವರ ಕಾರ್ಮಿಕ ವರ್ಗವನ್ನಂತೂ ಹಿಂಡಿ ಹಿಪ್ಪೆ ಮಾಡುತ್ತಿದೆ. ಜುಲೈ 13ರವರೆಗೆ ಜಿಲ್ಲೆಯಲ್ಲಿ 350 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.

‘ನಮ್ಮ ಜಿಲ್ಲೆಯಲ್ಲಿ ಡೆಂಗಿ ಹಾವಳಿ ಅಷ್ಟಾಗಿ ಉಲ್ಬಣವಾಗಿಲ್ಲ. ಹೊರಗಡೆಯಿಂದ ಬಂದವರಲ್ಲೇ ಈ ಪ್ರಕರಣ ಜಾಸ್ತಿ ಇದೆ’ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. ಆದರೆ, ಈಚಿನ ದಿನಗಳಲ್ಲಿ ಸ್ಥಳೀಯರೂ ಸಾಕಷ್ಟು ಸಂಖ್ಯೆಯಲ್ಲಿ ಈ ರೋಗದಿಂದ ಬಳಲುತ್ತಿರುವುದು ಕಾಣಿಸಿಕೊಂಡಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಡೆಂಗಿಯಿಂದ ಸಾವು ಪ್ರಕರಣಗಳು ಸಂಭವಿಸಿರಲಿಲ್ಲ. 

ADVERTISEMENT

ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಡೆಂಗಿ ಸಲುವಾಗಿ ಚಿಕಿತ್ಸೆಗೆ ಬಂಟ್ವಾಳ ತಾಲ್ಲೂಕಿನ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಆದರೆ, ಅವರ ಸಾವು ಡೆಂಗಿಯಿಂದಾಗಿಯೇ ಸಂಭವಿಸಿದೆಯೇ ಎಂಬುದನ್ನು ಆರೋಗ್ಯ ಇಲಾಖೆ ಇನ್ನೂ ದೃಢಪಡಿಸಿಲ್ಲ. ‘ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಅವರಿಗೆ ಅಪಸ್ಮಾರ ಕಾಣಿಸಿಕೊಂಡಿತ್ತು. ಹಾಗಾಗಿ ಅವರ ಸಾವಿಗೆ ಡೆಂಗಿಯೇ ಕಾರಣವೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ  ಡಾ.ನವೀನಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

2023ರ ಅಕ್ಟೋಬರ್‌ನಲ್ಲಿ ಡೆಂಗಿ ಜ್ವರದ ಚಿಕಿತ್ಸೆಗಾಗಿ ದಾಖಲಾಗಿದ್ದ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಕೊನೆಯುಸಿರೆಳೆದಿದ್ದನಾದರೂ, ಆತನ ಸಾವು ‘ಹೃದಯಾಘಾತದಿಂದ ಸಂಭವಿಸಿದೆ’ ಎಂದು ವೈದ್ಯರು ತಿಳಿಸಿದ್ದರು.

ಮಲೇರಿಯಾ ಉಲ್ಬಣವಾದಾಗ ಪಾಲಿಕೆ ಈ ರೋಗದ ನಿಯಂತ್ರಣಕ್ಕೆಂದೇ ವಿಶೇಷ ಕಾರ್ಯಪಡೆಯನ್ನು ರೂಪಿಸಿತ್ತು. ಖಾಸಗಿ ವೈದ್ಯರು ಹಾಗೂ ವೈದ್ಯಕೀಯ ಮತ್ತು ನರ್ಸಿಂಗ್‌ ಕಾಲೇಜುಗಳ ಪ್ರತಿನಿಧಿಗಳು ಹಾಗೂ ಸ್ವಯಂಸೇವಾ ಸಂಸ್ಥೆ  ನೆರವಿನೊಂದಿಗೆ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲಾಗಿತ್ತು. ಮೆಲೇರಿಯಾ ಪ್ರಕರಣಗಳ ಮೇಲೆ ನಿಗಾ ವಹಿಸಲು, ಸೊಳ್ಳೆ ಉತ್ಪಾದನಾ ತಾಣಗಳನ್ನು ಪತ್ತೆ ಹಚ್ಚಿ ನಾಶಪಡಿಸಲು ಆ್ಯಪ್ ಒಂದನ್ನು ರೂಪಿಸಿ, ಸಾರ್ವಜನಿಕರ ಬಳಕೆಗೂ ಅವಕಾಶ ಕಲ್ಪಿಸಲಾಗಿತ್ತು. ಡೆಂಗಿ ಹಾವಳಿ ನಿಯಂತ್ರಣಕ್ಕೆ ಇನ್ನೂ ಅಂತಹ ಪರಿಣಾಮಕಾರಿ ಪ್ರಯತ್ನಗಳು ಕಾಣಿಸುತ್ತಿಲ್ಲ. 

ಡೆಂಗಿ ಕಾಣಿಸಿಕೊಂಡಲ್ಲಿ ಟಾಮಿಫಾಸ್‌ ರಾಸಾಯನಿಕ ಔಷಧ ಸಿಂಪಡಿಸಿ ಸೊಳ್ಳೆಗಳ ಲಾರ್ವಾ ನಾಶಪಡಿಸಲಾಗುತ್ತಿದೆ. ಬಿಟಿಐ ಎಂಬ ಜೈವಿಕ ದ್ರಾವಣ ಸಿಂಪಡಿಸಿಯೂ ಸೊಳ್ಳೆಗಳನ್ನು ಹತೋಟಿಗೆ ತರಲಾಗುತ್ತಿದೆ. ಆದರೆ, ಪಾಲಿಕೆ ಬಳಿ ಈ ಔಷಧ ಸಿಂಪಡಿಸುವ ಸಿಬ್ಬಂದಿಯ ಕೊರತೆ ತೀವ್ರವಾಗಿದೆ ಎಂಬುದು ಕೆಲವು ಪಾಲಿಕೆ ಸದಸ್ಯರ ದೂರು.

‘ಸದ್ಯಕ್ಕೆ ಡೆಂಗಿ ಕಾಣಿಸಿಕೊಂಡ ಪ್ರದೇಶದಲ್ಲಿ ಮಾತ್ರ ಔಷಧಿ ಸಿಂಪಡಿಸಲಾಗುತ್ತಿದೆ. ಇಬ್ಬರು ಸಿಬ್ಬಂದಿ ಹತ್ತಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಔಷಧ ಸಿಂಪಡಿಸಬೇಕು. ಪರಿಸ್ಥಿತಿ ಹೀಗಿದ್ದರೆ ಡೆಂಗಿಯನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಲುಸಾಧ್ಯವೇ‘ ಎಂದು ಪಾಲಿಕೆ ಸದಸ್ಯರೊಬ್ಬರು ಪ್ರಶ್ನಿಸಿದರು.

‘ಪಾಲಿಕೆ ಬಳಿ ಸದ್ಯಕ್ಕೆ 46 ಮಂದಿ ಸ್ಪ್ರೇಯರ್‌ಗಳು ಲಭ್ಯ ಇದ್ದಾರೆ. ಬೇಡಿಕೆ ಬಂದಲ್ಲಿ ಔಷಧ ಸಿಂಪಡಣೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್‌ ತಿಳಿಸಿದರು.

ವರದಿ ವಿಳಂಬ?:

‘ಡೆಂಗಿ ಪತ್ತೆಗೆ ನಡೆಸುವ ರಕ್ತ ಪರೀಕ್ಷೆಯ ವರದಿ 24 ಗಂಟೆಗಳಲ್ಲಿ ಕೈಸೇರುತ್ತದೆ’ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು. ಕೆಲವು ಖಾಸಗಿ ಪ್ರಯೋಗಾಲಯದಲ್ಲಿ ದುಡ್ಡು ಕೊಟ್ಟು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ 24 ಗಂಟೆಗಳಲ್ಲಿ ವರದಿ ಕೈಸೇರುತ್ತಿದೆ. ಆದರೆ, ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಂಕಿತ ಡೆಂಗಿ ಪ್ರಕರಣಗಳಿದ್ದರೆ ರಕ್ತದ ಮಾದರಿಯನ್ನು ವೆನ್ಲಾಕ್‌ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿಂದ ವರದಿ ಬರಲು ಮೂರು ದಿನಗಳು ತಗಲುತ್ತಿವೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಡೆಂಗಿ ದೃಢಪಟ್ಟರೂ ಅದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜ್ವರದ  ಲಕ್ಷಣವನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ ವರದಿ ವಿಳಂಬವಾದರು ಅದರಿಂದ ಚಿಕಿತ್ಸೆ ಮೇಲೆ ಪರಿಣಾಮಬೀರದು. ಆದರೆ, ರಕ್ತದ ಮಾದರಿಯ ಬೇಗ ಕೈಸೇರಿದರೆ ಡೆಂಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದಕ್ಕೆ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು. 

ನಗರದ ಬಿಜೈ, ವೆಲೆನ್ಸಿಯಾ, ಬಂದರು, ಬೈಕಂಪಾಡಿ ಪ್ರದೇಶಗಳಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆ. ಬಿಜೈ ಕಾಪಿಕಾಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ್ವರಕ್ಕೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ತಿಂಗಳಿನಿಂದ ಈಚೆಗೆ ಜಾಸ್ತಿಯಾಗಿದೆ. 

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಈ ಪಿಎಚ್‌ಸಿಯ ಸಮೀಪದಲ್ಲಿದೆ. ಹಾಗಾಗಿ ಹೆಚ್ಚಿನ ವಲಸೆ ಕಾರ್ಮಿಕರು ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾರೆ. ಈ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯೂ ಹೆಚ್ಚಿನ ಪ್ರಮಾಣದಲ್ಲಿನಡೆಯುತ್ತಿದೆ. ಹಾಗಾಗಿ ಇಲ್ಲಿ ವಲಸೆ ಕಾರ್ಮಿಕರ ಸಂಖ್ಯೆಯೂ ಜಾಸ್ತಿ. ಹೆಚ್ಚಿನ ಡೆಂಗಿ ಪ್ರಕರಣಗಳು ವಲಸೆ ಕಾರ್ಮಿಕರಲ್ಲೇ ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿಗಳಲ್ಲಿ ಕಡಿಮೆ’ ಎಂದು ಬಿಜೈ ಕಾಪಿಕಾಡ್‌ನ ಆರೋಗ್ಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಡೆಂಗಿ ಪ್ರಕರಣಗಳು ದಿಢೀರ್‌ ಹೆಚ್ಚಲು ಶುರುವಾದ ಬಳಿಕ ಪಾಲಿಕೆಯೂ ಎಚ್ಚೆತ್ತಿದೆ. ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರು, ಡೆಂಗಿ ನಿಯಂತ್ರಣದ ಬಗ್ಗೆ ವಿಶೇಷ ಸಭೆ ನಡೆಸಿ ಕೆಲವೊಂದು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಇದರ ಬೆನ್ನಲ್ಲೇ ವಾರ್ಡ್‌ ಮಟ್ಟದಲ್ಲಿ ಆರೋಗ್ಯಾಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಡೆಂಗಿ ಪತ್ತೆಯಾದ ಪ್ರದೇಶದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಈ ತಂಡಗಳು ಕ್ರಮವಹಿಸುತ್ತಿವೆ.

ಪೂರಕ ಮಾಹಿತಿ: ಲೋಕೇಶ್ ಸುಬ್ರಹ್ಮಣ್ಯ, ನರೇಂದ್ರ ಕೇರೆಕಾಡು

ನಗರದಲ್ಲಿ ಎಲ್ಲೆಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಎಂಬ ಮಾಹಿತಿಯೇ ಪಾಲಿಕೆ ಬಳಿ ಮಾಹಿತಿಯೇ ಇಲ್ಲ. ಡೆಂಗಿ ನಿಯಂತ್ರಣಕ್ಕೆ ಪಾಲಿಕೆ ಇನ್ನಷ್ಟು ಸನ್ನದ್ಧಗೊಳ್ಳಬೇಕು
ನವೀನ್ ಡಿಸೋಜ ಪಾಲಿಕೆ ಸದಸ್ಯ
ಹೊರ ರಾಜ್ಯಗಳ ವಲಸೆ ಕಾರ್ಮಿಕರು ನೆಲೆಸಿರುವಲ್ಲಿ ಡೆಂಗಿ ಪ್ರಕರಣ ಹೆಚ್ಚುತ್ತಿದೆ. ಇಂತಹ ಕಡೆ ಡೆಂಗಿ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ
ವರುಣ್ ಚೌಟ ಪಾಲಿಕೆ ಸದಸ್ಯ ಹೊಸಬೆಟ್ಟು ವಾರ್ಡ್‌
ವಾರ್ಡ್‌ ಮಟ್ಟದಲ್ಲಿ ತಂಡಗಳನ್ನು ರಚಿಸುವ ಮೂಲಕ ಪಾಲಿಕೆ ಡೆಂಗಿ ನಿಯಂತ್ರಣಕ್ಕೆ ಕ್ರಮವಹಿಸಿದೆ. ಜನರ ಸಹಕಾರ ಸಿಕ್ಕರೆ ಮಾತ್ರ ಡೆಂಗಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು
ಆನಂದ ಸಿ.ಎಲ್‌. ಪಾಲಿಕೆ ಆಯುಕ್ತ
ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚುತ್ತಿದೆ ಡೆಂಗಿ 
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಕಡಬ ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶಗಳಲ್ಲೂ ಶಂಕಿತ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇವರಲ್ಲಿ ಬಹುತೇಕರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.  ಬಹುತೇಕ ಕಡೆ ಮಳೆಗಾಲ ಆರಂಭಗೊಂಡಿದ್ದರೂ ಚರಂಡಿ ದುರಸ್ತಿ ಕಾರ್ಯ ನಡೆದೇ ಇಲ್ಲ. ಇಂತಹ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿವೆ. ಸುಳ್ಯ ತಾಲ್ಲೂಕಿನ  ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮದಲ್ಲಿ ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗಿವೆ. ಮೂಲ್ಕಿ ಕಟೀಲು ಕೆಮ್ರಾಲ್‌ ಪ್ರದೇಶದಲ್ಲೂ 20ಕ್ಕೂ ಹೆಚ್ಚು ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗಿದ್ದವು. 
‘ಡ್ರೈ ಡೇ’– ಘೋಷಣೆಗಷ್ಟೇ ಸೀಮಿತ
‘ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಶುಕ್ರವಾರ ‘ಡ್ರೈ–ಡೇ’ಯನ್ನಾಗಿ ನಿರ್ವಹಿಸಬೇಕು. ಆದಿನ ಮನೆಯ ನೀರಿನ ತೊಟ್ಟಿಯ ನೀರನ್ನು ಖಾಲಿ ಮಾಡಿ ಶುಚಿಗೊಳಿಸಿ ಒಣಗಿಸಬೇಕು. ಸುತ್ತ ಮುತ್ತಲಿನ ಪರಿಸರದಲ್ಲಿ ಎಲ್ಲೂ ಶುದ್ಧ ನೀರು ನಿಲ್ಲದಂತೆ  ಎಚ್ಚರವಹಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿತ್ತು. ಆದರೆ ಅದಕ್ಕೆ ಸಾರ್ವಜನಿಕರಿಂದ ಸಿಕ್ಕ ಪ್ರತಿಕ್ರಿಯೆ ಅಷ್ಟಕ್ಕಷ್ಟೇ. ಬೆರಳೆಣಿಕೆಯ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಈ ಬಗ್ಗೆ ಜಾಗೃತಿ ಮೂಡಿಸುವ ಸಭೆಗಳನ್ನು ನಡೆಸಲಾಗಿದೆ. ಜನರಲ್ಲಿ ಈ ಬಗ್ಗೆ  ಜಾಗೃತಿ ಮೂಡಿಲ್ಲ’ ಎಂದು ಪಾಲಿಕೆ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.   
ಸವಾಲಾದ ಖಾಲಿ ನಿವೇಶನಗಳು
ನಗರದ ಬಹುತೇಕ ಖಾಲಿ ನಿವೇಶನಗಳು ಜನ ಕದ್ದುಮುಚ್ಚಿ ಕಸ ಬಿಸಾಡುವ ತಾಣಗಳಾಗಿ ಪರಿವರ್ತನೆಗೊಂಡಿವೆ. ಇಲ್ಲಿ ಪ್ಲಾಸ್ಟಿಕ್ ಬಾಟಲಿ ಎಳನೀರಿನ ಚಿಪ್ಪು ಮುಂತಾದ ಕಸಗಳು ತಿಮಗಳಾನುಗಟ್ಟಲೆ ಹಾಗೆಯೇ ಬಿದ್ದಿರುತ್ತವೆ. ಅವುಗಳು ಸೊಳ್ಳೆಗಳ ಸಂತಾನೋತ್ಪಾದನೆಗೆ ಸೊಂಪಾದ ತಾಣಗಳಾಗಿಬಿಟ್ಟಿವೆ. ಇಂತಹ ಖಾಲಿ ನಿವೇಶನಗಳ ಮಾಲೀಕರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಪಾಲಿಕೆ ಸದಸ್ಯ ಮನೋಹರ ಕದ್ರಿ. ಕೆಲವು ಗೂಡಂಗಡಿಗಳು ಕಸವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡುವ ಮೂಲಕ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದ್ದಾರೆ ಎಂದು ದೂರುತ್ತಾರೆ ಜಯಾನಂದ ಅಂಚನ್‌
ಪ್ಲೇಟ್‌ಲೆಟ್‌ಗೆ ಹೆಚ್ಚು ದರ ವಸೂಲಿ?
ಡೆಂಗಿ ರಕ್ತ ಪರೀಕ್ಷಗೆ ಹಾಗೂ ರೋಗಿಗಳಿಗೆ ನೀರುವ ರಕ್ತದ ಪ್ಲೇಟ್‌ಲೆಟ್‌ಗೆ ದುಬಾರಿ ದರ ವಿಧಿಸಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಕೆಲವು ಆಸ್ಪತ್ರೆಗಳು ಪ್ಲೇಟ್‌ಲೆಟ್‌ಗೆ ಸರ್ಕಾರ ವಿಧಿಸಿದಷ್ಟೇ ದರ ವಸೂಲಿ ಮಾಡಿ ಅದನ್ನು ನೀಡುವುದರ ಸೇವಾ ಶುಲ್ಕವಾಗಿ ಹೆಚ್ಚಿನ ಹಣ ಪಡೆಯುತ್ತಿವೆ ಎಂಬ ದೂರುಗಳಿವೆ. ‘ಪ್ಲೇಟ್‌ಲೆಟ್‌ಗೆ ಹೆಚ್ಚು ದರ ವಿಧಿಸಿದ ಬಗ್ಗೆ ನಮಗೆ ದೂರು ಬಂದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕುಟುಂಬದ ರೋಗಿಗಳಿಗೆ ಉಚಿತವಾಗಿ ಪ್ಲೇಟ್‌ಲೆಟ್‌ ನೀಡಲಾಗುತ್ತದೆ. ಇತರರಿಗೆ ಯೂನಿಟ್‌ಗೆ ₹ 350ರಿಂದ ₹ 400 ದರ ವಿಧಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ₹ 500ರವರೆಗೆ ದರ ವಿಧಿಸುತ್ತಿವೆ’ ಎಂದು ಡಾ.ನವೀನಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.