ADVERTISEMENT

ಮಂಗಳೂರು: ಕಟೀಲು ಮೇಳಕ್ಕೆ ₹ 1ಕೋಟಿ ಮೊತ್ತದ ಆಭರಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:21 IST
Last Updated 12 ನವೆಂಬರ್ 2025, 23:21 IST
ಹರಿನಾರಾಯಣ ಆಸ್ರಣ್ಣ
ಹರಿನಾರಾಯಣ ಆಸ್ರಣ್ಣ   

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅರಂಭಿಸಿರುವ 7ನೇ ಯಕ್ಷಗಾನ ಮೇಳಕ್ಕೆ ಭಕ್ತರು ₹ 1 ಕೋಟಿ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಒದಗಿಸಿದ್ದಾರೆ ಎಂದು ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ತಿಳಿಸಿದರು.

ಎರಡು ಪೂಜಾ ಕಿರೀಟಗಳು, ತಲಾ ಒಂದೊಂದು ದೇವಿ ಕಿರೀಟ ಮತ್ತು ರಾಜಕಿರೀಟ, ಒಂದು ತೊಟ್ಟಿಲು, ತುರಾಯಿ, ಚಕ್ರಗಳು, ಪೆಟ್ಟಿಗೆ ಇತ್ಯಾದಿಗಳು ಆಭರಣಗಳಲ್ಲಿ ಸೇರಿವೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಹೊಸ ಮೇಳದ ಬಸ್‌, ಟ್ರಕ್‌ ಸೇರಿದಂತೆ ಎಲ್ಲ ವ್ಯವಸ್ಥೆ ಭಕ್ತರಿಂದಲೇ ಆಗಿದೆ. ವರ್ಷದ ತಿರುಗಾಟದಲ್ಲಿ ಒಂದು ಮೇಳ ಸರಾಸರಿ 180 ಆಟಗಳನ್ನು ಪ್ರದರ್ಶಿಸುತ್ತದೆ. ಆದರೂ 15 ವರ್ಷಕ್ಕೆ ಆಡಿಸುವಷ್ಟು ಹರಕೆಯ ಆಟಗಳು ಉಳಿದಿವೆ. ಹೊಸ ಮೇಳದ ಸೇರ್ಪಡೆಯೊಂದಿಗೆ ಈ ವರ್ಷ ಸುಮಾರು 180 ಆಟಗಳು ಹೆಚ್ಚುವರಿಯಾಗಿ ಪ್ರದರ್ಶನಗೊಳ್ಳಲಿವೆ. ಕಟೀಲು ದೇವಸ್ಥಾನದ ಮೊದಲ ಮೇಳ ಆರಂಭವಾದದ್ದು ಯಾವಾಗ ಎಂಬುದಕ್ಕೆ ದಾಖಲೆಗಳು ಇಲ್ಲ. 2ನೇ ಮೇಳ 1975ರಲ್ಲಿ, 3ನೇ ಮೇಳ 1982ರಲ್ಲಿ, 1993ರಲ್ಲಿ 4ನೇ ಮೇಳ, 2010ರಲ್ಲಿ 5ನೇ ಮೇಳ ಮತ್ತು 2013ರಲ್ಲಿ 6ನೇ ಮೇಳ ಆರಂಭವಾಗಿತ್ತು’ ಎಂದರು. 

ADVERTISEMENT

ಕಾಲಮಿತಿ ಯಕ್ಷಗಾನದಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರಬಹುದು. ಆದರೆ ಬಹುತೇಕರು ರಾತ್ರಿ ಪೂರ್ತಿ ಯಕ್ಷಗಾನ ನೋಡಲು ಇಷ್ಟಪಡುವವರೇ. ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ತಲೆಬಾಗಿ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಲಾಗಿದೆ. ಇಲ್ಲದೇ ಇದ್ದರೆ ಈಗಲೂ ರಾತ್ರಿ ಪೂರ್ತಿ ಹರಕೆಯ ಆಟಗಳು ನಡೆಯುತ್ತಿದ್ದವು. ಕಟೀಲು ಮೇಳದ ಆಟಗಳೆಲ್ಲವೂ ಹರಕೆಗೆ ಸಂಬಂಧಿಸಿದ್ದಾಗಿರುವುದರಿಂದ ಮಧ್ಯದಲ್ಲಿ ಯಾವ ಅಡ್ಡಿಯೂ ಆಗಬಾರದು. ಹಾಗೆ ಆದರೆ ಭಕ್ತರು ಘಾಸಿಗೊಳ್ಳುತ್ತಾರೆ. ಆದ್ದರಿಂದ ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.