ಉಳ್ಳಾಲ: ಕೊಣಾಜೆ ಗ್ರಾಮದ ಪಟ್ಟೋರಿಯ ನಾಗಬ್ರಹ್ಮ ಉಳ್ಳಾಲ್ತಿ ಧರ್ಮರಸರ ಮಾಡ ಕ್ಷೇತ್ರದ ಉಳ್ಳಾಲ್ತಿ ಅಮ್ಮನವರ ಮುಗ ಮತ್ತು ಧರ್ಮರಸರ ಕಿರುವಾಳ್ ಭಂಡಾರದ ಪ್ರತಿಷ್ಠಾ ಕಲಾಶಾಭಿಷೇಕ, 490 ವರ್ಷಗಳ ಬಳಿಕ ಪಟ್ಟೋರಿಯಲ್ಲಿ ನಡೆಯಲಿರುವ ಉಳ್ಳಾಲ್ತಿ ಧರ್ಮರಸರ ಧರ್ಮ ನಡಾವಳಿ ಮಹೋತ್ಸವವು ಮಾರ್ಚ್ 16ರಿಂದ 18ರ ವರೆಗೆ ನಡೆಯಲಿದೆ ಎಂದು ನಾಗಬ್ರಹ್ಮ ಉಳ್ಳಾಲ್ತಿ ಧರ್ಮರಸರ ಧರ್ಮನಡಾವಳಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಹೇಳಿದರು.
ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬಡಾಜೆ ಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ವೈದಿಕ, ತೌಳವ ದೈವರಾಧನಾ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ. 10ರಂದು ಗೊನೆಮುಹೂರ್ತ, ಕೋಳಿಕುಂಟ ನಡೆಯಲಿದ್ದು, 16ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಉಗ್ರಾಣ ಮುಹೂರ್ತ, ಭಜನಾ ಮಂಗಳೋತ್ಸವ ನಡೆಯಲಿದೆ. 17ರಂದು ಸೋಮವಾರ ಬೆಳಿಗ್ಗೆ 8ರಿಂದ ಮುಗ ಮತ್ತು ಪ್ರತಿಷ್ಠಾ ಕಲಾಶಾಭಿಷೇಕ, ಭೂತನಾಗನ ಪ್ರತಿಷ್ಠೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ವಿಜೇತ್ ಶೆಟ್ಟಿ ಮಂಜನಾಡಿ ಅವರು ಬರೆದಿರುವ ‘ಪಟ್ಟೋರಿಯ ದೈವಂಗಳು’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಬಳಿಕ ನಾಟಕ ನಡೆಯಲಿದೆ ಎಂದರು.
18ರಂದು ದೈವಗಳ ಭಂಡಾರಕ್ಕೆ ಶುದ್ಧಿಕಲಶ, 10.30ರಿಂದ ಧರ್ಮರಸರ ನೇಮ ನಡೆಯಲಿದೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ನೇಮ, ವಲಸರಿ, ಕೆರೆದೀಪೋತ್ಸವ, ಹರಕೆ, ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಸಂಧ್ಯಾ ಭಜನೆ ಸಂಕೀರ್ತನೆ: ಮಾ.16 ರವರೆಗೆ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಸಂಜೆ 6ರಿಂದ 8ರವರೆಗೆ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ಹೇಳಿದರು.
ಕೊಣಾಜೆ ಬೀಡುವಿನ ಸತ್ಯನಾರಾಯಣ ಭಟ್, ಗಡಿಪ್ರಧಾನರಾದ ತಿಮ್ಮಯ್ಯ ಕಾಜವ ಯಾನೆ ದಿವಾಕರ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಕೋಶಾಧಿಕಾರಿ ಕರುಣಾಕರ ಕಾನ, ಲೇಖಕ ವಿಜೇತ್ ಶೆಟ್ಟಿ ಮಂಜನಾಡಿ, ಸಂಚಾಲಕ ಪ್ರವೀಣ್ ಕುಮಾರ್ ಪಟ್ಟೋರಿ ಶಿಕ್ಷಕ ಮೋಹನ್ ಶಿರ್ಲಾಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.