ADVERTISEMENT

ಧರ್ಮಸ್ಥಳ ಚಲೋ ಸಮಾವೇಶ | ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 13:01 IST
Last Updated 1 ಸೆಪ್ಟೆಂಬರ್ 2025, 13:01 IST
   

ಧರ್ಮಸ್ಥಳ: ‘ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ನಿತ್ಯ ಅಪಪ್ರಚಾರ ನಡೆಯುತ್ತಿದೆ.‌ ಇದನ್ನು ಇಷ್ಟು ದಿನ ತಾಳ್ಮೆಯಿಂದ ಸಹಿಸಿದೆವು. ಭಕ್ತರ ಸಹನೆ ಕಟ್ಟೆ ಒಡೆಯುವ ಸ್ಥಿತಿ ತಲುಪಿದೆ.‌  ಕ್ಷೇತ್ರದ ಭಕ್ತರು ಎಲ್ಲೆಡೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಸಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಿಂದೂ ಸಮಾಜದ ತಾಳ್ಮೆಯನ್ನು ಇನ್ನಷ್ಟು ಪರೀಕ್ಷೆ‌ ಮಾಡಬೇಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಿಜೆಪಿ ವತಿಯಿಂದ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಚಲೋ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

'ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ಹಿಂದೆ‌ ಷಡ್ಯಂತ್ರ ನಡೆದಿದೆ. ಇದನ್ನು ಹೊರತರಲು ಈ ಪ್ರಕರಣದ ತನಿಖೆಯನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಅಥವಾ ಸಿಬಿಐಗೆ ವಹಿಸಬೇಕು. ಹಿಂದೂ ಧರ್ಮ ವಿರೋಧಿ ಶಕ್ತಿಗಳು ಕೋಟಿಗಟ್ಟಲೆ ಹಣ ಪಡೆದು ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುತ್ತಿವೆ. ಆ ಶಕ್ತಿಗಳನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗದು. ಸಿಬಿಐ ಅಥವಾ ಎನ್ಐಎಯಿಂದ ತನಿಖೆ ಆದರೆ ಮಾತ್ರ ನ್ಯಾಯ ಸಿಗಲು ಸಾಧ್ಯ’ ಎಂದರು.

ADVERTISEMENT

'ಧರ್ಮಸ್ಥಳ ಸಣ್ಣ ದೇವಸ್ಥಾನ ಅಲ್ಲ.‌ ಕೋಟ್ಯಂತರ ಭಕ್ತರನ್ನು ಹೊಂದಿರುವ ಪವಿತ್ರ ಕ್ಷೇತ್ರ. ಯಾರೋ ಬೀದಿಯಲ್ಲಿ ಹೋಗುವವ ದೂರು ನೀಡಿದ ಮಾತ್ರಕ್ಕೆ, ಪ್ರಾಥಮಿಕ ತನಿಖೆಯನ್ನೂ‌ ಮಾಡದೇ ಎಸ್ಐಟಿ ಘೋಷಣೆ ಮಾಡಿದಿರಿ. ನಿಮಗೆ ಭಗವಂತ ಒಳ್ಳೆಯದು ಮಾಡಲು ಸಾಧ್ಯವೆ' ಎಂದು ಪ್ರಶ್ನಿಸಿದರು.

‘ಧರ್ಮಸ್ಥಳ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಯಾದಾಗ ಸ್ವಾಗತ ಮಾಡಿದ್ದೆವು. ಎಸ್ಐಟಿ ತನಿಖೆ ನಡೆಯುವಾಗ ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಿತ್ಯ ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ ಅದನ್ನು ತಡೆಯಲು ಕ್ರಮ ವಹಿಸಬೇಕಿತ್ತು. ದೂರು ನೀಡಿದ ವ್ಯಕ್ತಿಯನ್ನು 24 ಗಂಟೆಯಲ್ಲಿ ಒದ್ದು ಒಳಗೆ ಹಾಕಬೇಕಿತ್ತು.‌ ಸರ್ಕಾರ ಅದನ್ನೂ ಮಾಡಲಿಲ್ಲ’ ಎಂದರು.

ಸೌಜನ್ಯಾ ಹತ್ಯೆ ಪ್ರಕರಣ ಮರುತನಿಖೆಗೆ ಸರ್ಕಸರ ಕ್ರಮ ವಹಿಸಿ ಆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಿ. ಈ ವಿಚಾರದಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ಕೊಡುತ್ತದೆ’ ಎಂದರು.

ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, 'ದೇಶದ ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಲೇ ಬಂದಿದೆ. ಅದರ ಮುಂದುವರಿದ ಭಾಗವೇ ಧರ್ಮಸ್ಥಳ ಪ್ರಕರಣ. ಶನಿಸಿಂಗ್ಣಾಪುರ, ಶಬರಿಮಲೆ ಶ್ರದ್ಧೆಗೆ ಭಂಗತರುವ ಯತ್ನ ನಡೆದ ಬಳಿಕ ದರ್ಮಸ್ಥಳದ ಹೆಸರು ಕೆಡಿಸುವ ಯತ್ನಕ್ಕೆ ಕೈಹಾಕಿದ್ದಾರೆ' ಎಂದು ಆರೋಪಿಸಿದರು.

‘ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಬಿಟ್ಟು ಬಾಹುಬಲಿ ಬೆಟ್ಟವನ್ನು ಸಹಿತ ಅಗೆದರು. ಇನ್ನೊಂದು ಧರ್ಮದ ‌ದರ್ಗಾದಲ್ಲಿ ಇನ್ನೊಂದು ಹೆಣ ಹುಗಿದಿದ್ದೇನೆ ಎಂದರೆ ಅಲ್ಲಿಯೂ ಹೋಗಿ ಅಗೆಯಿರಿ ನೋಡೋಣ. ಒಂದಲ್ಲ, ಎರಡಲ್ಲ 16 ಕಡೆ ಅಗೆದರೂ ಈ ಕಾರ್ಯವನ್ನು ನಿಲ್ಲಿಸಲು ತಯಾರಿಲ್ಲ. ಜನ ಉಗಿಯಲಿಕ್ಕೆ ಶುರು ಮಾಡಿದ ಬಳಿಕವಷ್ಟೇ ಅದು ಬಂದ್ ಆಯಿತು' ಎಂದರು.

ಸಂಸದ ಜಗದೀಶ ಶೆಟ್ಟರ್, 'ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾಪದ ಕೊಡ ತುಂಬಿದೆ. ಸರ್ಕಾರದ ಅಂತ್ಯ ಸಮೀಪಿಸಿದೆ.‌ ಇದು ನಾಡಿನ ಜನರ ಶಾಪ. ಸಿದ್ದರಾಮಯ್ಯ ಅವರು ಕ್ಷಮಾಪಣೆ ಕೇಳಿ, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲಿ' ಎಂದರು.

‌ರಾಜ್ಯದ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ, 'ಮಹೇಶ್ವರನ ಸನ್ನಿಧಿ ಇರುವ ಧರ್ಮಸ್ಥಳವು ಪುಣ್ಯಭೂಮಿ ಧರ್ಮಭೂಮಿ, ಸಿದ್ಧರ ಭೂಮಿ. ಇಲ್ಲಿನ ಎದ್ದಿರುವ ಕೂಗು ತೂಫಾನ್ ಆಗಲಿದೆ. ಸನಾತನ‌ ಧರ್ಮದ ವಿರುದ್ಧ ನಡೆದುಕೊಂಡರೆ ದೇವರೇ ಬುದ್ದಿ ಕಲಿಸುತ್ತಾರೆ. ತಮಿಳುನಾಡಿನ ಸಂಸದರೊಬ್ಬರು ಈ ಷಡ್ಯಂತ್ರದ ಹಿಂದಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಬೇಕು’ ಎಂದು ಒತ್ತಾಯಿಸಿರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ತನಿಖೆ ನೆಪದಲ್ಲಿ ಎಸ್ಐಟಿ 22 ಅಡಿ ಆಳದ ಗುಂಡಿ ತಗೆದಿದೆಯಲ್ಲವೆ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಅದರಲ್ಲೇ ಹೂತು ಹಾಕಿ ಎಂದು ಕೇಳಲು ನಾವಿಲ್ಲಿಗೆ ಬಂದಿದ್ದೇವೆ' ಎಂದರು.

ಎಸ್ಐಟಿ ಅಧೀಕಾರಿಗಳು ‌ಪ್ರಾಮಾಣಿಕವಾಗಿ ಕೆಲಸ‌ಮಾಡಲು ಬಿಡುತ್ತಿಲ್ಲ.‌ ದೂರುದಾರ ಚೆನ್ನೈಗೆ ಏಕೆ ಹೋದ, ಯಾರ ಜೊತೆ ಸಭೆ ನಡೆಸಿದ. ಅವನಿಗೆ ‌ಹಣಕಾಸು ನೆರವು ಕೊಟ್ಟವರು ಯಾರು, ಮತಾಂತರ ಮಾಫಿಯಾ ಎಷ್ಟು ಪ್ರಮಾಣದಲ್ಲಿ ಸಕ್ರಿಯವಾಗಿದೆ. ಬುರುಡೆ ಹಿಂದಿನ ತಲೆ ಕೆಟ್ಟ ಬುರುಡೆ ಯಾವುದು ಎಂದು ಹೇಳುವ ತಾಕತ್ತು ಸಿದ್ದರಾಮಯ್ಯ ಅವರಿಗೆ ಇಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ಎನ್ಐಎಗೆ ಕೊಡಲು ನಾವು ಒತ್ತಾಯಿಸುವುದು ಎಂದರು.

ಬಿಜೆಪಿ ಮುಖಂಡ ಶ್ರಿರಾಮುಲು, 'ಕಾಂಗ್ರೆಸ್ ನೇತೃತ್ವದ ಸರ್ಕಾರ ಧರ್ಮಸ್ಥಳ‌ದ ಮಂಜುನಾಥನಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದೆ' ಎಂದು ಆರೋಪಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾ.ಬ್ರಿಜೇಶ್ ಚೌಟ, ತೇಜಸ್ಚಿಸೂರ್ಯ, ಶಾಸಕರಾದ ಡಾ.ಅಶ್ವತ್ಥನಾರಾಯಣ, ವಿ.ಸುನಿಲ್ ಕುಮಾರ್, ಡಿ.ವೇದವ್ಯಾಸ ಕಾಮತ್, ಎಸ್.ರಘು, ಡಾ.ವೈ‌.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಪಕ್ಷದ ಮುಖಂಡರಾದ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾನಂದ‌ ಗೌಡ ಮೊದಲಾದವರು ಭಾಗವಹಿಸಿದ್ದರು.

'ಧರ್ಮಸ್ಥಳ ಪ್ರಕರಣದ ನಿರ್ಮಾಪಕ‌ ಕಾಂಗ್ರೆಸ್'

'ಧರ್ಮಸ್ಥಳ ಪ್ರಕರಣ ಯಾವ ಸಿನಿಮಾದ ಚಿತ್ರಕತೆಗಿಂತಲೂ ಕಡಿಮೆ ಇಲ್ಲ. ಈ ಸಿನಿಮಾಸ ಮುಂದೆ ಕೆಜಿಎಫ್, ಆರ್.ಆರ್.ಆರ್ ಏನೂ ಅಲ್ಲ. ಇದರ ನಿರ್ದೇಶಕ ಯಾರೂ ಇರಬಹುದು, ಆದರೆ, ನಿರ್ಮಾಪಕ‌ ಕಾಂಗ್ರೆಸ್’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್, ತಿಮರೋಡಿ ಗ್ಯಾಂಗ್ ಸೇರಿಕೊಂಡಿದೆ. ಇವರೆಲ್ಲ ನಗರ ನಕ್ಸಲರು. ಇವರೇ ತನಿಖೆಯನ್ನು ಎಸ್ಐಟಿಗೆ ಕೊಡಲು ಒತ್ತಡ ಹೇರಿದವರು ಇವರೆ. ಈ ಷಡ್ಯಂತ್ರ ಬಗ್ಗೆ ಎನ್ಐಎ ‌ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಲಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಗ್ಯಾಂಗ್ ಇದನ್ನು ಮುಚ್ಚಿ ಹಾಕಿ ಬಿಡುತ್ತದೆ' ಎಂದರು.

'ಧರ್ಮಸ್ಥಳದಲ್ಲಿ ಸಾವಿರಾರು ಅತ್ಯಾಚಾರಗಳಾಗಿವೆ. ಸಾವಿರಾರು ಹೆಣಗಳನ್ನು ಹೂತಿದ್ದಾರೆ ಎಂದು ಹುಡುಕಿಸಿದ ಸರ್ಕಾರಕ್ಕೆ ಮಸೀದಿಯಲ್ಲಿ ಮೂಳೆ ಹುಡುಕಲು ಆಗುತ್ತದೆಯೇ' ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.