ಗಿರೀಶ ಮಟ್ಟೆಣ್ಣನವರ
ಮಂಗಳೂರು: ‘ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನನ್ನು ಬಂಧಿಸಿದರಷ್ಟೇ ಸಾಲದು. ಆತನನ್ನು ಮಂಪರು ಪರೀಕ್ಷೆಗೂ ಒಳಪಡಿಸಬೇಕು’ ಎಂದು ಗಿರೀಶ್ ಮಟ್ಟೆಣ್ಣನವರ್ ಒತ್ತಾಯಿಸಿದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ಸಂಬಂಧ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಬಂದ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ ಪ್ರಕರಣದ ಆರೋಪಿಯಾಗಿರುವ ಗಿರೀಶ ಮಟ್ಟೆಣ್ಣನವರ್, ಬೆಳ್ತಂಗಡಿ ಠಾಣೆಗೆ ಶನಿವಾರ ವಿಚಾರಣೆ ಹಾಜರಾದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಸಾಕ್ಷಿ ದೂರುದಾರನ ಬಂಧನ ಒಳ್ಳೆಯ ಬೆಳವಣಿಗೆ. ನೂರಾರು ಶವ ಹೂತು ಹಾಕಿದ ಆರೋಪವನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಈ ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆಯೇ ಎಂಬುದನ್ನು ಎಸ್‌ಐಟಿ ಬಹಿರಂಗಪಡಿಸಲಿದೆ. ಎಸ್‌ಐಟಿ ವಿಚಾರಣೆಗೆ ಕರೆದರೆ, ನಮಗೂ ಆತನಿಗೂ ಏನು ಸಂಬಂಧವಿತ್ತು ಎಂದು ತಿಳಿಸುತ್ತೇವೆ. ಯಾವುದೇ ಮುಚ್ಚು ಮರೆ ಇಲ್ಲದೇ ಜನರಿಗೆ ಸತ್ಯ ತಿಳಿಯಲಿದೆ’ ಎಂದರು.
‘ಸೌಜನ್ಯಾ ಪರ ಹೋರಾಟಗಾರರು ಯಾರೂ ಎಸ್‌ಐಟಿ ಮೇಲೆ ಆಕ್ರೋಶ ವ್ಯಕ್ತಪಡಿಸಬಾರದು. ಎಸ್‌ಐಟಿಗೆ ಅದರದ್ದೇ ಆದ ತನಿಖಾ ವಿಧಾನ ಇದೆ. ತನಿಖಾ ಕಾರ್ಯವನ್ನು ಪೂರ್ಣಗೊಳಿಸಲು ಬಿಡಬೇಕು. ಸೌಜನ್ಯಾ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ’ ಎಂದರು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖಾಧಿಕಾರಿ ಪಿಎಸ್‌ಐ ಅಶೋಕ್ ಮಲಬಾಗಿ ಅವರು, ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಲುವಾಗಿ ಗುರುವಾರ ಬೆಳ್ತಂಗಡಿ ತಾಲ್ಲೂಕಿನ, ಉಜಿರೆ ಗ್ರಾಮದ ತಿಮರೋಡಿ ಹೌಸ್‌ಗೆ ತೆರಳಿದ್ದರು. ‘ಈ ವೇಳೆ ಆರೋಪಿಯ ಮನೆಯಲ್ಲಿದ್ದ ಗಿರೀಶ್ ಮಟ್ಟಣ್ಣವರ ಹಾಗೂ ಜಯಂತ್ ಸೇರಿದಂತೆ ಸುಮಾರು 10 ಮಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಜನರನ್ನು ಸೇರಿಸಿ, ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸದಂತೆ ಬಲಪ್ರಯೋಗ ನಡೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಸಂದೇಶ ಪ್ರಸಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ’ ಎಂದು ಪಿಎಸ್‌ಐ ಅಶೋಕ್ ಮಲಬಾಗಿ ದೂರು ನೀಡಿದ್ದು, ಮಟ್ಟಣ್ಣನವರ, ಜಯಂತ್ ಹಾಗೂ ತಿಮರೋಡಿ ಸಹಿತ 10 ಮಂದಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132 (ಸರ್ಕಾರಿ ಉದ್ಯೋಗಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು, 189(2) (ಅಕ್ರಮ ಕೂಟ ರಚನೆ), 351(2) (ಕ್ರಿಮಿನಲ್ ಬೆದರಿಕೆ), 263(a) (ಬಂಧನಕ್ಕೆ ಅಡ್ಡಿಪಡಿಸುವುದು) ಹಾಗೂ 262 (ಬಂಧನವನ್ನು ವಿರೋಧಿಸುವುದು) ಅಡಿ ಬೆಳ್ತಂಗಡಿ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.