ADVERTISEMENT

ಧರ್ಮಸ್ಥಳ ಪ್ರಕರಣ: ವಿಠಲ ಗೌಡ ಸಮ್ಮುಖದಲ್ಲಿ ಮರು ಮಹಜರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 12:26 IST
Last Updated 10 ಸೆಪ್ಟೆಂಬರ್ 2025, 12:26 IST
   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್ಐಟಿ) ಪಾಂಗಾಳದ ವಿಠಲ ಗೌಡ ಅವರನ್ನು ನೇತ್ರಾವತಿ ಸ್ನಾನಘಟ್ಟ ಪಕ್ಕದ ಕಾಡಿನೊಳಗೆ ಬುಧವಾರ ಮತ್ತೊಮ್ಮೆ ಕರೆದೊಯ್ದು ಮಹಜರು ನಡೆಸಿತು.

ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬೆಳಿಗ್ಗೆ ಹಾಜರಾಗಿದ್ದ ವಿಠಲ ಗೌಡ (ಕೊಲೆಯಾಗಿರುವ ಸೌಜನ್ಯಾ ಅವರ ಮಾವ)  ಅವರಿಂದ ಎಸ್‌ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡರು. ಸಾಕ್ಷಿ ದೂರುದಾರ ತಂದೊಪ್ಪಿಸಿದ್ದ ಬುರುಡೆ ಸಿಕ್ಕಿದ್ದ ಜಾಗಕ್ಕೆ ಅವರನ್ನು ಸಿ.ಎ. ಸೈಮನ್ ನೇತೃತ್ವದ ತಂಡವು ಸಂಜೆ ವೇಳೆ ಕರೆದೊಯ್ಯಿತು.

ಮಹಜರು ನಡೆಸಿದ ಅಧಿಕಾರಿಗಳು ಕಾಡಿನಿಂದ ಸುಮಾರು ಒಂದು ಗಂಟೆ ಬಳಿಕ ಹೊರಬಂದರು. ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ವಿಧಿವಿಜ್ಞಾನ ತಜ್ಞರು ಇರಲಿಲ್ಲ.

ADVERTISEMENT

‘ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಬುರುಡೆ ಇದ್ದ ಜಾಗವನ್ನು ವಿಠಲ ಗೌಡ ಅವರೇ ಸಾಕ್ಷಿದೂರುದಾರನಿಗೆ ತೋರಿಸಿದ್ದರು. ಅಲ್ಲಿಂದ ತೆಗೆದ ಬುರುಡೆಯನ್ನೇ ಸಾಕ್ಷಿ ದೂರುದಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಬುರುಡೆ ಸಿಕ್ಕಿದ ಜಾಗವನ್ನು ಎಸ್‌ಐಟಿ ಅಧಿಕಾರಿಗಳು ಸೆ.6ರಂದು ಮಹಜರು ನಡೆಸಿದ್ದರು. ಈ ವೇಳೆ ಆ ಪ್ರದೇಶದಲ್ಲಿ ಮೃತದೇಹ ಅವಶೇಷಗಳು ನೆಲದ ಮೇಲೆಯೇ ಕಂಡುಬಂದಿದ್ದವು. 

’ಈ ಹಿಂದೆ ಮಹಜರು ನಡೆಸಿದ ವೇಳೆ ಕತ್ತಲಾವರಿಸಿದ್ದರಿಂದ ಆ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸುವುದು ಸಾಧ್ಯವಾಗಿರಲಿಲ್ಲ. ಹಾಗಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲು ವಿಠಲ ಗೌಡ ಅವರನ್ನು ಮತ್ತೊಮ್ಮೆ ಅಲ್ಲಿಗೆ ಕರೆದೊಯ್ಯಲಾಯಿತು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮಾತಿನ ಚಕಮಕಿ:  ಎಸ್‌ಐಟಿ ನಡೆಸಿ ಮಹಜರಿನ ಕುರಿತು ವರದಿ ಮಾಡಲು ಬಂದಿದ್ದ ‘ಕುಡ್ಲ ರಾಂಪೇಜ್‌’ ಯೂಟ್ಯೂಬ್ ಚಾನೆಲ್‌ನ ಅಜಯ್‌ ಜೊತೆ ಸ್ಥಳೀಯ ಯುವಕರ ಗುಂಪು ‘ಆಧಾರರಹಿತ ಸುದ್ದಿ ಪ್ರಕಟಿಸುತ್ತೀರಿ’ ಎಂದು ಆರೋಪಿಸಿ  ಮಾತಿನ ಚಕಮಕಿ ನಡೆಸಿತು. ಸ್ಥಳದಲ್ಲಿದ್ದ ಧರ್ಮಸ್ಥಳ ಠಾಣೆಯ ಪಿಎಸ್‌ಐ, ಸ್ಥಳೀಯರನ್ನು ದೂರಕ್ಕೆ ಕಳುಹಿಸಿದರು.

ಹಲವರ ವಿಚಾರಣೆ: ಕೇರಳದ ಯೂಟ್ಯೂಬರ್‌ ಮುನಾಫ್, ‘ಯುನೈಟೆಡ್ ಮಿಡಿಯಾ’ ಯೂಟ್ಯೂಬ್ ವಾಹಿನಿಯ ಅಭಿಷೇಕ್‌, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ., ಗಿರೀಶ ಮಟ್ಟೆಣ್ಣವರ ಅವರನ್ನು ಅಧಿಕಾರಿಗಳು ಬೆಳ್ತಂಗಡಿಯ ಎಸ್‌ಐಟಿಯ ಕಚೇರಿಗೆ ಕರೆಸಿಕೊಂಡು ಬುಧವಾರವೂ ವಿಚಾರಣೆಗೆ ಒಳಪಡಿಸಿದರು.

ಮೊಬೈಲ್ ವಶಕ್ಕೆ:  ‘ಈ ಪ್ರಕರಣಕ್ಕ ಸಂಬಂಧಿಸಿದ ಅನೇಕ ವಿಚಾರಗಳ ಕುರಿತು ಪ್ರಶ್ನೆ ಕೇಳಿದ್ದಾರೆ. ನನಗೆ ತಿಳಿದ ಸತ್ಯವಿಚಾರಗಳನ್ನು ಅವರಿಗೆ ತಿಳಿಸಿದ್ದೇನೆ. ನನ್ನ ಮೂರು ಮೊಬೈಲ್‌ಗಳನ್ನು ಅವರ ವಶಕ್ಕೆ ಒಪ್ಪಿಸಿದ್ದೇನೆ. ಈ ತನಿಖೆಯಿಂದ ಸತ್ಯಾಂಶ ಹೊರಗೆ ಬರುತ್ತದೆ ಎಂದು ವಿಶ್ವಾಸ ಇದೆ’ ಎಂದು ಜಯಂತ್‌ ಟಿ. ಸುದ್ದಿಗಾರರಿಗೆ ತಿಳಿಸಿದರು.

ಕೇರಳದ ಯೂಟ್ಯೂಬರ್‌ ಮುನಾಫ್‌, ‘ಎಸ್‌ಐಟಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚೆನ್ನಾಗಿ ನಡೆಸುತ್ತಿದ್ದಾರೆ. ತುಂಬಾ ಮಂದಿ ಯೂಟ್ಯೂಬರ್‌ಗಳು ಈ ಪ್ರಕರಣದ ಕುರಿತು ಸುದ್ದಿ ಮಾಡಿದ್ದರೂ, ನನ್ನನ್ನೇ ಏಕೆ ವಿಚಾರಣೆಗೆ ಕರೆದರೋ ಗೊತ್ತಿಲ್ಲ. ನಾನು ಯೂಟ್ಯೂಬ್‌ ಚಾನೆಲ್ ಆರಂಭಿಸಿ ಒಂದು ವರ್ಷವಷ್ಟೇ ಆಗಿದೆ. ಜನರಿಗೆ ಸತ್ಯಾಂಶ ತಿಳಿಸಲು ನಾನು ವಿಡಿಯೊ ಮಾಡುತ್ತೇನೆ’ ಎಂದರು.

ಜೋಡಿ ಕೊಲೆ: ರಿಟ್ ಅರ್ಜಿ ಹಿಂಪಡೆದು ಎಸ್‌ಐಟಿಗೆ ದೂರು

ಧರ್ಮಸ್ಥಳ ಗ್ರಾಮದ ಬೂರ್ಜೆಯಲ್ಲಿ ನಡೆದಿದ್ದ ಜೋಡಿ ಕೊಲೆ ಕುರಿತು ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೊಲೆಯಾದ ನಾರಾಯಣ ಅವರ ಪುತ್ರ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟುವಿನ ಗಣೇಶ ಅವರು ಬುಧವಾರ ಎಸ್‌ಐಟಿ ಕಚೇರಿಗೆ ಮತ್ತೊಂದು ದೂರು ಅರ್ಜಿ ಸಲ್ಲಿಸಿದರು.

ಬೂರ್ಜೆಯಲ್ಲಿ ವಾಸವಿದ್ದ ಆನೆ ಮಾವುತ ನಾರಾಯಣ ಮತ್ತು ಅವರ ಸೋದರಿ ಯಮುನಾ 2012 ಸೆ. 21ರಂದು ಕೊಲೆಯಾಗಿದ್ದರು. ಈ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ  ನಾರಾಯಣ ಅವರ ಮಕ್ಕಳಾದ ಗಣೇಶ ಹಾಗೂ ಭಾರತಿ ಅವರು ಎಸ್‌ಐಟಿಗೆ ಆ.18ರಂದು ದೂರು ನೀಡಿದ್ದರು. ಜೋಡಿ ಕೊಲೆಯ ಆರೋಪಿಗಳು ಪತ್ತೆಯಾಗಿಲ್ಲ. ಇದು ಇತ್ಯರ್ಥವಾಗದ ಪ‍್ರಕರಣ ಎಂದು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಿ– ವರದಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ನಾರಾಯಣ ಅವರ ಕುಟುಂಬದವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

‘ನಾವು ಈ ಹಿಂದೆ ಎಸ್‌ಐಟಿಗೆ ದೂರು ನೀಡಿದಾಗ ಅಧಿಕಾರಿಗಳು ‘ಈ  ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ ತನಿಖೆಗೆ ಪರಿಗಣಿಸಲಾಗದು’ ಎಂದು ತಿಳಿಸಿದ್ದರು. ಹಾಗಾಗಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹಿಂಪಡೆದಿದ್ದು ಅದರ ಪ್ರತಿಯನ್ನು ಲಗತ್ತಿಸಿ ಎಸ್‌ಐಟಿಗೆ ಮತ್ತೊಂದು ದೂರು ನೀಡಿದ್ದೇವೆ’ ಎಂದು ಗಣೇಶ ತಿಳಿಸಿದರು.

‘ಎಸ್‌ಐಟಿ ಮೇಲೆ ನಮಗೆ ವಿಶ್ವಾಸ ಇದೆ. ಹಾಗಾಗಿಯೇ ದೂರು ಕೊಟ್ಟಿದ್ದೇವೆ. ಈ ದೂರಿನ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ವಾರ ಈ ಬಗ್ಗೆ ತಿಳಿಸುತ್ತೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ’ ಎಂದರು.

32 ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ದೂರು

‘ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುರಿತು ಅಪಪ್ರಚಾರ ನಡೆಸುವ ಸಂಚು ನಡೆದಿದೆ. ಸ್ವತಂತ್ರ ಯೂಟ್ಯೂಬರ್‌ಗಳು ಸೇರಿ ಅನೇಕ ಮಂದಿ ಇದರಲ್ಲಿ ಭಾಗಿಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರರಹಿತ ಹಾಗೂ ಅವಹೇಳನಕಾರಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ಚಟುವಟಿಕೆಗೆ ವಿದೇಶಗಳಿಂದ ಅಕ್ರಮವಾಗಿ ಹಣಕಾಸಿನ ನೆರವು ಒದಗಿಸಿರುವ ಹಾಗೂ ರಾಷ್ಟ್ರವಿರೋಧಿ ಮತ್ತು ಭಯೋತ್ಪಾದನಾ ಸಂಘಟನೆಗಳು ಈ ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಧರ್ಮಸ್ಥಳದ ಸುರೇಂದ್ರ ಪ್ರಭು ಎಂಬುವವರು ಎಸ್‌ಐಟಿಗೆ ದೂರು ನೀಡಿದ್ದಾರೆ.

ಕನ್ನಡದ 17 ತಮಿಳಿನ 10 ಇಂಗ್ಲಿಷ್‌ ಮತ್ತು ಮಲಯಾಳದ ತಲಾ ಎರಡು ಹಾಗೂ ತೆಲುಗಿನ ಒಂದು ಯೂಟ್ಯೂಬ್‌ ವಾಹಿನಿಯ ಹೆಸರನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೂ ಈ ಬಗ್ಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ವಿಠಲ ಗೌಡನನ್ನು ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.