ADVERTISEMENT

ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಮತ್ತೊಬ್ಬರಿಂದ ದೂರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 18:09 IST
Last Updated 2 ಆಗಸ್ಟ್ 2025, 18:09 IST
ಎಸ್‌ಐಟಿಗೆ ದೂರು ನೀಡಿದರ ಜಯಂತ್ ಟಿ. 
ಎಸ್‌ಐಟಿಗೆ ದೂರು ನೀಡಿದರ ಜಯಂತ್ ಟಿ.    

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ದೂರಲಾಗಿರುವ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್ಐಟಿ) ತನಿಖೆ ಮುಂದುವರಿಸಿದೆ. ಏತನ್ಮಧ್ಯೆ, ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ಗ್ರಾಮದ ಜಯಂತ್ ಟಿ. ಎಂಬುವರು ಎಸ್‌ಐಟಿಗೆ ಶನಿವಾರ ದೂರು ನೀಡಿದ್ದಾರೆ.

ಬೆಳ್ತಂಗಡಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ದೂರುದಾರ ಜಯಂತ್, ‘ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 15 ವರ್ಷಗಳ ಹಿಂದೆ ಅಂದಾಜು 13 ರಿಂದ 15 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಳು. ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹವನ್ನು ನಾನು ನೋಡಿದ್ದೆ. ಅದರ ಮರಣೋತ್ತರ ಪರೀಕ್ಷೆ ನಡೆದಿರಲಿಲ್ಲ. ದೂರು ನೀಡಿದ ಒಂದು ವಾರದ ನಂತರ ಆ ಶವವನ್ನು ಹೂತು ಹಾಕಿದ್ದರು. ಮೃತದೇಹವನ್ನು ಕಾನೂನು ಬದ್ಧವಾಗಿ ವಿಲೇ ಮಾಡಿರಲಿಲ್ಲ. ಎಫ್‌ಐಆರ್‌ ದಾಖಲಿಸದೆ ಕೊಲೆಯನ್ನು ಮುಚ್ಚಿ ಹಾಕಲಾಗಿತ್ತು’ ಎಂದು ಆರೋಪಿಸಿದರು.

‘ಆ ಕೊಲೆ ಮಾಡಿದ್ದು ಯಾರು ಎಂದು ನನಗೆ ತಿಳಿದಿಲ್ಲ. ಮೃತದೇಹವನ್ನು ಹೂತು ಹಾಕಿದ್ದ ಜಾಗವನ್ನು ನಾನು ಎಸ್ಐಟಿಗೆ ತೋರಿಸುತ್ತೇನೆ. ಈ ಬಗ್ಗೆ ಎಸ್ಐಟಿ ಸಮರ್ಪಕವಾದ ತನಿಖೆ ನಡೆಸುತ್ತದೆ ಎಂಬ ವಿಶ್ವಾಸವಿದೆ’ ಎಂದು ಜಯಂತ್ ತಿಳಿಸಿದರು.

ADVERTISEMENT

ಧರ್ಮಸ್ಥಳದಲ್ಲಿ ಶನಿವಾರ ನಡೆದ ಭೂಮಿ ಅಗೆಯುವ ಕಾರ್ಯಾಚರಣೆಯ ಸ್ಥಳದಿಂದ ಸಾಕ್ಷಿದೂರುದಾರ ಹೊರಬರುತ್ತಿರುವುದು

‘ಇಲ್ಲಿ ತುಂಬಾ ಕೊಲೆಗಳಾಗಿವೆ, ಇದು ಅನೇಕರಿಗೆ ಗೊತ್ತಿರುವ ವಿಷಯ. ಆದರೆ, ಭಯದ ವಾತಾವರಣ ಇದ್ದುದರಿಂದ ದೂರು ನೀಡಲು ಯಾರೂ ಧೈರ್ಯ ಮಾಡುತ್ತಿರಲಿಲ್ಲ. ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ, ನಮ್ಮ ಭಯವನ್ನು ದೂರ ಮಾಡಿದೆ. ಎಸ್ಐಟಿ ತಂಡದ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ನಾನು ಎಸ್ಐಟಿಗೆ ದೂರು ನೀಡಿದ್ದೇನೆ. ಭಾನುವಾರ ರಜಾ ದಿನ. ಹಾಗಾಗಿ ಸೋಮವಾರ ಮತ್ತೆ ಬರುವಂತೆ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮತ್ತೆ ಎಸ್ಐಟಿ ಮುಂದೆ ಹಾಜರಾಗಿ ಎಲ್ಲ ವಿಷಯ ತಿಳಿಸುತ್ತೇನೆ’ ಎಂದರು.

ಎರಡರಲ್ಲೂ ಸಿಗಲಿಲ್ಲ ಅವಶೇಷ: ಎಸ್‌ಐಟಿ ಶನಿವಾರ ಧರ್ಮಸ್ಥಳದಲ್ಲಿ ಎರಡು ಕಡೆ ಶೋಧ ಕಾರ್ಯ ನಡೆಸಿತು. ಎರಡೂ ಕಡೆ ಮೃತದೇಹ ಹೂತ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ ಒಂಬತ್ತನೇ ಹಾಗೂ 10ನೇ ಜಾಗದಲ್ಲಿ ಯಂತ್ರವನ್ನು ಬಳಸಿ ಶನಿವಾರ ನೆಲವನ್ನು ಅಗೆಯಲಾಯಿತು. ಧರ್ಮಸ್ಥಳ ಸ್ನಾನಘಟ್ಟದ ಸಮೀಪದಲ್ಲೇ ಇರುವ ಈ ಎರಡೂ ಜಾಗಗಳು ಉಜಿರೆಯಿಂದ ಧರ್ಮಸ್ಥಳವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಿಂದ ಕೇವಲ 10 ಮೀಟರ್‌ ದೂರದಲ್ಲಿದ್ದವು. ಶೋಧ ಕಾರ್ಯದ ದೃಶ್ಯಗಳು ಹೊರಗಡೆ ಕಾಣಬಾರದೆಂದು ರಸ್ತೆ ಪಕ್ಕದಲ್ಲಿ ಉದ್ದಕ್ಕೂ ಹಸಿರು ಬಣ್ಣದ ಪರದೆ ಕಟ್ಟಲಾಗಿತ್ತು.

ಧರ್ಮಸ್ಥಳದಲ್ಲಿ ಶನಿವಾರ ಎಸ್‌ಐಟಿ ತಂಡ ಅಗೆಯುವ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದಾಗಿನ ಚಿತ್ರ

ಭಾರಿ ಮಳೆಯಿಂದ ಹಾಗೂ ಭಾರಿ ಗಾತ್ರದ ಮರಗಳ ಬೇರುಗಳು ಅಲ್ಲಿ ಇದ್ದುದರಿಂದ ಅಗೆಯುವ ಕಾರ್ಯ ನಿಧಾನಗತಿಯಲ್ಲಿ ಸಾಗಿತು. ಶೋಧ ಕಾರ್ಯದ ಸ್ಥಳದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿಯಲ್ಲಿರುವ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಸಾಕ್ಷಿ ದೂರುದಾರ ಹಾಗೂ ಆತನ ಜೊತೆಗೆ ಬಂದಿರುವ ವಕೀಲರು ಹಾಜರಿದ್ದರು.

ಈ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿರುವ 13 ಜಾಗಗಳ ಪೈಕಿ 10 ಜಾಗಗಳಲ್ಲಿ ಎಸ್ಐಟಿ ಇದುವರೆಗೆ ಶೋಧ ಕಾರ್ಯ ಪೂರ್ಣಗೊಳಿಸಿದೆ. ಆತ ತೋರಿಸಿದ್ದ ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಅವಶೇಷ ಗುರುವಾರ ಪತ್ತೆಯಾಗಿತ್ತು. ಇನ್ನುಳಿದ ಒಂಬತ್ತು ಕಡೆಗಳಲ್ಲಿ ಮೃತದೇಹದ ಯಾವುದೇ ಕುರುಹುಗಳು ಸಿಕ್ಕಿಲ್ಲ.

ಭಾನುವಾರ ಶೋಧ ಕಾರ್ಯಾಚರಣೆ ಇರುವುದಿಲ್ಲ. ಸೋಮವಾರ ಮತ್ತೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.